Advertisement

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿ

03:26 PM Feb 07, 2021 | Team Udayavani |

ಚಿತ್ರದುರ್ಗ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ದೇವಾಂಗ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹಂಪಿ ಹೇಮಕೂಟ
ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ದೇವಾಂಗ ಸಮಾಜದ ಮೂಲ ಪುರುಷ ಶ್ರೀ ದೇವಲ ಮಹರ್ಷಿ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿಸಬೇಕೆಂದರು.

Advertisement

ರಾಜ್ಯದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮ, ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ರೇಷ್ಮೆ ಮಂಡಳಿ ಮುಂತಾದ ನಿಗಮ ಮಂಡಳಿಗಳಿಂದ ದೇವಾಂಗ
ಸಮಾಜದವರನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತಲು ಸಾಧ್ಯವಾಗಿಲ್ಲ. ದೇವರಾಜ ಅರಸು ಅವರು 2ಎಗೆ ಸೇರಿಸಿದ್ದರೂ ಇದರಲ್ಲಿ ನಾನಾ
ಜಾತಿಗಳಿರುವ ಕಾರಣ ಅನುಕೂಲವಾಗಿಲ್ಲ ಎಂದು ಹೇಳಿದರು.

ದೇವಲ ಮಹರ್ಷಿ ಮತ್ತು ಆದ್ಯ ವಚನಕಾರ ದೇವರದಾಸಿಮಯ್ಯರ ಪುತ್ಥಳಿಯನ್ನು ಬೆಂಗಳೂರು ಮತ್ತು ದೇವಾಂಗ ಸಮಾಜದವರು ವಾಸಿಸುವ ಪ್ರಮುಖ ನಗರಗಳಲ್ಲಿ ಸರಕಾರದಿಂದ ಸ್ಥಾಪಿಸಬೇಕು. ಕೂಡಲಸಂಗಮ ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಂತೆ ದೇವರ
ದಾಸಿಮಯ್ಯರ ಜನ್ಮಸ್ಥಳ ಮುದನೂರಿನಲ್ಲಿ ಮುದನೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗಾಗಿ ಹಾಗೂ ದೇವಾಂಗದವರ ಶಕ್ತಿಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿಯಲ್ಲಿ ಬನಶಂಕರಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಅಗತ್ಯ ಅನುದಾನ ಮೀಸಲಿರಿಸಿ ಅಭಿವೃದ್ಧಿಪಡಿಸಬೇಕು ಎಂದರು.

ರಾಜ್ಯ ಜವಳಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೋ. ತಿಪ್ಪೇಶ್‌ ಮಾತನಾಡಿ, ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿ ಕ ಸಂಖ್ಯೆಯಲ್ಲಿ ಸಮುದಾಯವಿದೆ. ಜಾಗತೀಕರಣದಿಂದಾಗಿ ನೇಕಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಲಕ್ಷಾಂತರ
ಮಂದಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದು ಕನಿಷ್ಠ ಜೀವನ ನಡೆಸುವಂತಹ ಸ್ಥಿತಿಗೆ ತಲುಪಿದ್ದಾರೆ. ಹಾಗಾಗಿ ಆಂಧ್ರಪ್ರದೇಶ, ಛತ್ತಿಸ್‌ಗಡ ರಾಜ್ಯಗಳಲ್ಲಿ ಸ್ಥಾಪಿಸಿರುವಂತೆ ಇಲ್ಲೂ ನಮ್ಮ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ತಮಿಳುನಾಡು ಸರಕಾರ ನೀಡಿರುವಂತೆಯೇ ಕೈಮಗ್ಗ ವೃತ್ತಿನಿರತ ಕುಟುಂಬಗಳಿಗೆ 100 ಯೂನಿಟ್‌ ಉಚಿತ ವಿದ್ಯುತ್‌ ನೀಡಬೇಕು. ಮಹಾರಾಷ್ಟ್ರ ಸರಕಾರ
ವಿದ್ಯಾರ್ಥಿಗಳಿಗೆ ನೀಡಿದಂತೆ ಪ್ರತ್ಯೇಕ ಶೇ. 2ರಷ್ಟು ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಟಿ. ಮಂಜುನಾಥ್‌, ದೇವಾಂಗ ಸಂಘದ ಚಿತ್ರದುರ್ಗ ತಾಲೂಕು ಅಧ್ಯಕ್ಷ ಎಸ್‌. ಸುರೇಶ್‌, ಸಮಿತಿ ನಿರ್ದೇಶಕ ಗೋವಿಂದರಾಜ್‌, ಸಹ ಸಂಚಾಲಕ ಕೆ.ಸಿ. ತಿಮ್ಮಶೆಟ್ರಾ ಮತ್ತಿತರರು ಇದ್ದರು.

Advertisement

ಓದಿ :ನಮ್ಮ ಸರ್ಕಾರ ಡಕೋಟಾ ಬಸ್ ಅಲ್ಲ ಶರವೇಗದ ಜೆಟ್ ವಿಮಾನ: ಸಚಿವ ಶ್ರೀರಾಮುಲು 

Advertisement

Udayavani is now on Telegram. Click here to join our channel and stay updated with the latest news.

Next