ಚಿತ್ರದುರ್ಗ: ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪಟ್ಟು ಬಿಡದೆ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ಸೂಚಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜ. 26 ರಂದು ಬೆಂಗಳೂರಿನಲ್ಲಿ ಬೃಹತ್ ಜನ ಗಣರಾಜ್ಯೋತ್ಸವ ಪರೇಡ್ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ. ಶಂಕರಪ್ಪ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹೋರಾಟದಲ್ಲಿ 540ಕ್ಕೂ ಹೆಚ್ಚು ಸಂಘಟನೆಗಳು ಪಾಲ್ಗೊಂಡಿವೆ. ಸಣ್ಣ ಸಣ್ಣ ಘಟನೆಗಳಿಗೂ ಪ್ರತಿಕ್ರಿಯಿಸುವ ಪ್ರಧಾನಿ ಮೋದಿಗೆ ದೆಹಲಿಯಲ್ಲಿ 142 ರೈತರು ಪ್ರಾಣ ತೆತ್ತಿರುವುದು ಗೊತ್ತಿದ್ದರೂ ಜಾಣ ನಡೆ ಅನುಸರಿಸುತ್ತಿರುವುದು ಬೇಸರ ತಂದಿದೆ ಎಂದರು.
ಅಗತ್ಯ ವಸ್ತುಗಳ ಕಾಯ್ದೆಯನ್ನು ಸಡಿಲಗೊಳಿಸಿದರೆ ರೈತನ ಬೆಳೆಗಳಿಗೆ ಬೆಲೆ ಕುಸಿಯುತ್ತದೆ. ಸಿರಿವಂತರು ಲಕ್ಷಾಂತರ ಟನ್‌ಗಟ್ಟಲೆ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಸ್ವಾಮಿನಾಥನ್ ವರದಿ ಜಾರಿಗೆ ತರಲು ಆಗದ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಮನಸ್ಸಿಲ್ಲ. ಚುನಾವಣಾ ಪೂರ್ವದಲ್ಲಿ ವಿದೇಶಗಳಲ್ಲಿರುವ ನಮ್ಮ ದೇಶದ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿ ವಂಚಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ಹಿಂದಕ್ಕ ಪಡೆಯಬೇಕು ಎಂದು ಒತ್ತಾಯಿಸಿದರು.
ಓದಿ : ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಮಾರ್ಗಗಳನ್ನು ಸೂಚಿಸಿದ ದೆಹಲಿ ಪೊಲೀಸರು
ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್ ಬಾಬು ಮಾತನಾಡಿ, ಕೃಷಿ ಕಾಯ್ದೆ ವಿರೋಧಿ ಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟವನ್ನು ಪ್ರಧಾನಿ ಮೋದಿ ನಿರ್ಲಕ್ಷಿಸುತ್ತಿರುವುದನ್ನು ಖಂಡಿಸಿ ಜ. 26 ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಲಾಗುವುದು. ಗಣತಂತ್ರ ವ್ಯವಸ್ಥೆಗೆ ಅಪಮಾನ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರೈತರ ಶಕ್ತಿ ಏನೆಂಬುದನ್ನು ತೋರಿಸುವುದು ರ್ಯಾಲಿಯ
ಉದ್ದೇಶ ಎಂದು ಹೇಳಿದರು.
ಸಿಐಟಿಯು ಸಂಘಟನೆಯ ಸಿ.ಕೆ. ಗೌಸ್‌ಪೀರ್ ಮಾತನಾಡಿ, ರೈತರ ಹೋರಾಟಕ್ಕೆ ದೆಹಲಿಯಲ್ಲಿ ನಮ್ಮ ಕಾರ್ಮಿಕರು ಬೆಂಬಲಿಸಿದ್ದಾರೆ. ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಿದೆ. ಕಾರ್ಮಿಕರು, ರೈತರು ದೇಶದ ಬೆನ್ನೆಲುಬು= ಎನ್ನುವುದನ್ನು ಪ್ರಧಾನಿ ಮೋದಿ ಮರೆತಂತಿದೆ. ಹಾಗಾಗಿ ಕಾರ್ಮಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಮನವಿ
ಮಾಡಿದರು.
ಎಐಡಿವೈಒ ಸಂಘಟನೆಯ ರವಿಕುಮಾರ್ ಮಾತನಾಡಿದರು. ರೈತ ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ, ಟಿ. ಶವುಲ್ಲಾ, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ತಾಳಿಕೆರೆ ಇದ್ದರು.
ಓದಿ : 33 ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟ