Advertisement

ಶಿವಶರಣ ಹಡಪದ ಅಪ್ಪಣ್ಣ ಆದರ್ಶ ಪಾಲಿಸಿ

06:29 PM Jul 25, 2021 | Team Udayavani |

ಚಿತ್ರದುರ್ಗ :  ಶಿವಶರಣ ಹಡಪದ ಅಪ್ಪಣ್ಣ 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್‌ ವ್ಯಕ್ತಿಯಾಗಿದ್ದಾರೆ ಎಂದು ಅಪರ ಜಿಲ್ಲಾ ಧಿಕಾರಿ ಇ.ಬಾಲಕೃಷ್ಣ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಹಡಪದ ಅಪ್ಪಣ್ಣ ಅವರು ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕೆಲವು ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಶ್ರಮಿಸಿದರು.

ತಮ್ಮ ವಚನಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಿದ ಅವರು ಸದಾ ಸ್ಮರಣೀಯರು ಎಂದು ಹೇಳಿದರು. ಕೋವಿಡ್‌-19 ಸಾಂಕ್ರಾಮಿಕ ರೋಗದ ಸಂಖ್ಯೆ ಏರುಗತಿಯಲ್ಲಿ ಇರುವುದರಿಂದ ಹಾಗೂ ಮೂರನೇ ಅಲೆಯ ಮುನ್ಸೂಚನೆ ಇರುವುದರಿಂದ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದರು. ಉಪವಿಭಾಗಾ ಧಿಕಾರಿ ಆರ್‌.ಚಂದ್ರಯ್ಯ ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣ ಅವರು 12ನೇ ಶತಮಾನದಲ್ಲಿಯೇ ಸಾಮಾಜಿಕ ತಾರತಮ್ಯಗಳ ಸುಧಾರಣೆಗಾಗಿ, ಅಸಮಾನತೆ ಹೋಗಲಾಡಿಸಲು ಬಸವಣ್ಣನ ಅವರ ಅನುಯಾಯಿಯಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ.

ಆ ನಿಟ್ಟಿನಲ್ಲಿ ಅನುಭವ ಮಂಟಪವನ್ನು ಸ್ಥಾಪನೆ ಮಾಡಿ ಸಾಮಾಜಿಕ ಚಿಂತಕರನ್ನು ಸೇರಿಸಿ ಸಾಮಾಜಿಕ ಸಮಾನತೆಯ ಧ್ಯೇಯಗಳಿಗಾಗಿ, ಸಮಾಜ ಸುಧಾರಣೆಗಾಗಿ, ಜನರ ಸಾಮಾಜಿಕ, ಆರ್ಥಿಕ ಸಮಾನತೆಗಾಗಿ ಚಿಂತನ ಮಂಥನಗಳನ್ನು ಅನುಭವ ಮಂಟಪದಲ್ಲಿ ನಡೆಸಲಾಗುತ್ತಿತ್ತು ಎಂದರು. ಹಡಪದ ಅಪ್ಪಣ್ಣ ಅವರು ಬಸವಣ್ಣನವರಿಗೆ ಅತ್ಯಂತ ಆತ್ಮೀಯರು ಮತ್ತು ಕಾರ್ಯದರ್ಶಿಗಳಾಗಿದ್ದರು. 12ನೇ ಶತಮಾನದಲ್ಲಿ ಸಾಮಾಜಿಕ, ಆರ್ಥಿಕ ಸುಧಾರಣೆಗಾಗಿ ತಮ್ಮ ವಚನಗಳ ಮೂಲಕ ಹೋರಾಟ ಮಾಡಿ ಸಮಾಜದಲ್ಲಿನ ತಾರತಮ್ಯಗಳ ನಿವಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ತಹಶೀಲ್ದಾರ್‌ ಸತ್ಯನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಧನಂಜಯ, ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ವೀರಭದ್ರಪ್ಪ, ಕಾರ್ಯದರ್ಶಿ ಚೆನ್ನಬಸವಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next