ಹರಿಹರ : ಸೇವಾದಳದ ಶತಮಾನೋತ್ಸವ ನಿಮಿತ್ತ ಎನ್.ಎಸ್. ಹಡೇìಕರ್ ಹುಟ್ಟೂರು ಹಾವೇರಿ ಜಿಲ್ಲೆಯ ತಿಳುವಳ್ಳಿಯಿಂದ ಜನಾಂದೋಲನ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಅಖೀಲ ಭಾರತ ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿ ಬಲರಾಮ್ ಸಿಂಗ್ ಭದೋರಿಯ ತಿಳಿಸಿದರು.
ತಿಳುವಳ್ಳಿಗೆ ತೆರಳುವ ಮಾರ್ಗ ಮಧ್ಯ ಶನಿವಾರ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇವಾದಳ 98 ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಲ್ಲೊಬ್ಬರಾದ ಡಾ| ನಾರಾಯಣ ಸುಬ್ಬರಾವ್ ಹಡೇìಕರ್ ಹುಟ್ಟೂರಿನಿಂದ ಜನಾಂದೋಲನ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಹಡೇಕರ್ ಹುಟ್ಟಿದ ತಿಳುವಳ್ಳಿ, ಅವರ ಕರ್ಮಭೂಮಿ ಬೆಳಗಾವಿ ಜಿಲ್ಲೆಯ ಘಟಪ್ರಭಾ ಹಾಗೂ ಧಾರವಾಡಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಸೇವಾದಳದ ಭವ್ಯ ಇತಿಹಾಸ ಸಾರುವ ಶತಮಾನೋತ್ಸವ ಸ್ಮಾರಕ ಕಟ್ಟಡ ನಿರ್ಮಿಸುವ ಯೋಚನೆಯಿದೆ. ಇದೇ ಕಾರಣಕ್ಕೆ ಹಡೇಕರ್ ಜನ್ಮಸ್ಥಳ ತಿಳುವಳ್ಳಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿದರು.
ಕಾಂಗ್ರೆಸ್ ಸೇವಾದಳಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ ಎಂದ ಭದೋರಿಯ, ಉತ್ತರ ಕರ್ನಾಟಕದ ಉಮಾಬಾಯಿ ಕುಂದಾಪುರ, ದುರ್ಗಾಬಾಯಿ ದೇಶಮುಖ್, ಡಾ| ಸಾವಿತ್ರಿಬಾಯಿ ಮಹಾಜನ್ ಇತರರನ್ನು ನೆನಪು ಮಾಡಿಕೊಂಡರು.
ಸೇವಾದಳ ಕಾಂಗ್ರೆಸ್ಸಿನ ಮೂಲ ಸಂಸ್ಥೆ. ಸ್ವಾತಂತ್ರ ಪೂರ್ವದಲ್ಲಿ ನಾಗಪುರದ ಕೇಂದ್ರೀಯ ಕಾರಾಗೃಹದಲ್ಲಿ ಸೇವಾದಳದ ಚಟುವಟಿಕೆಗಳು ಆರಂಭವಾದವು. ಪ್ರಥಮ ಅಧ್ಯಕ್ಷರಾಗಿ ಜವಾಹರಲಾಲ್ ನೆಹರು ಆಯ್ಕೆಯಾಗಿದ್ದರು.
ಸೇವಾದಳ ಶತಮಾನೋತ್ಸವ ದೇಶಾದ್ಯಂತ ನಡೆಯುತ್ತಿದೆ. ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸೇವಾದಳ ಕಾರ್ಯಕಾರಿ ಮುಖ್ಯ ಸಂಘಟಕ ವಿ.ವಿ. ತುಳಸಿಗೇರಿ, ಉಪಾಧ್ಯಕ್ಷರಾದ ಕೆ.ಬಿ. ವಿನಾಯಕ ಮೂರ್ತಿ, ಹನುಮಂತರಾವ್ ಜವಳಿ, ಪ್ರಧಾನ ಕಾರ್ಯದರ್ಶಿ ಡಾ| ವಿಶ್ವನಾಥ ಚಿಂತಾಮಣಿ, ಸಂಯೋಜಕ ಚಿನ್ಮಯ ಎಂ. ಕಲ್ಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಗೋವಿಂದ ರೆಡ್ಡಿ ಇತರರು ಇದ್ದರು.