ಚಳ್ಳಕೆರೆ: ವೈದ್ಯರು ಹಾಗೂ ಆರೋಗ್ಯ ಇಲಾಖೆ ಪರಿಶ್ರಮದಿಂದ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದು, ಮೂರನೇ ಹಂತ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳ ಆರೋಗ್ಯ ರಕ್ಷಣೆಗೆ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಇಲ್ಲಿನ ವೆಂಕಟೇಶ್ವರ ನಗರದ ಜಗಜೀವನರಾಂ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಮಕ್ಕಳ ತಜ್ಞರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ತಿಂಗಳಗಷ್ಟೇ “ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಯಶಸ್ವಿಯಾಗಿದೆ. ಈಗ “ಮಕ್ಕಳ ತಜ್ಞರ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಗ್ಧ ಮಕ್ಕಳನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡುವ ಉದ್ದೇಶ ಹೊಂದಲಾಗಿದೆ. ವಿಶೇಷವಾಗಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಮೂರನೇ ಹಂತದ ಕೋವಿಡ್ ಸಮಯದಲ್ಲಿ ಹೆಚ್ಚಿನ ಪ್ರಾಣಾಪಾಯವಾಗಬಹುದು.
ಇದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಕಾಳಜಿ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷé ತೋರದೆ ಮಕ್ಕಳ ಯೋಗಕ್ಷೇಮಕ್ಕಾಗಿ ಹಗಲಿರುಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಸಹಾಯಕ ಶಿಶು ಅಭಿವೃದ್ಧಿ ಅ ಧಿಕಾರಿ ನವೀನ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಾದ್ಯಂತ 0-6ರ ತನಕ 29 ಸಾವಿರ ಮಕ್ಕಳಿದ್ದಾರೆ. ಅದರಲ್ಲಿ ಅಪೌಷ್ಟಿಕತೆ ಹಿನ್ನೆಲೆಯುಳ್ಳ ಮಕ್ಕಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆರ್‌ಬಿಎಸ್‌ಕೆ ತಂಡದ ವೈದ್ಯರಾದ ರಮೇಶ್, ಮಂಜುನಾಥ, ಸಂದೀಪ್, ಗೀತಾ ಅವರು ಮಕ್ಕಳ ಆರೋಗ್ಯ ಪರೀಕ್ಷೆಯಲ್ಲಿ ತೊಡಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ, ಉಪಾಧ್ಯಕ್ಷೆ ಜೈತುಂಬಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ. ರಮೇಶ್ ಗೌಡ, ಸದಸ್ಯರಾದ ಟಿ. ಮಲ್ಲಿಕಾರ್ಜುನ್, ಆರೋಗ್ಯ ಇಲಾಖೆಯ ಎಸ್.ಬಿ. ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡರಾದ ಪ್ರಕಾಶ್, ಪ್ರಸನ್ನಕುಮಾರ್, ಮಹೇಶ್, ವೀರೇಶ್, ಲ್ಯಾಬ್ ಟೆಕ್ನಿಷಿಯನ್ ಎಚ್. ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.