ಚಿತ್ರದುರ್ಗ : ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ರೈತರು ಅನುಭವಿಸಿರುವ ನಷ್ಟದ ಬಗ್ಗೆ ಅಂದಾಜು ಮಾಡಲು ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶನಿವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮಡಿದವರಿಗೆ ಮತ್ತು ಇದೇ ರೀತಿ ರಾಜ್ಯದಾದ್ಯಂತ ಮಡಿದ ಕೊರೊನಾ ಸೋಂಕಿತರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂ. ಪರಿಹಾರ ಒದಗಿಸಬೇಕು. ಈ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಸರ್ಕಾರವೇ ಹೊರಬೇಕು.
ಗ್ರಾಮೀಣ ಭಾಗದಲ್ಲಿ ಕೊರೊನಾ ಪರೀಕ್ಷೆ ಹೆಚ್ಚಿಸಬೇಕು. ಡೀಸೆಲ್, ಪೆಟ್ರೋಲ್, ವಿದ್ಯುತ್ ದರವನ್ನು ಇಳಿಸಬೇಕು. ಕೃಷಿ ಪರಿಕರಗಳ ಮೇಲೆ ವಿ ಸುವ ಜಿಎಸ್‌ಟಿ ಹಾಗೂ ರಾಜ್ಯದ ವ್ಯಾಪ್ತಿಯ ತೆರಿಗೆಯನ್ನೂ ಸಂಪೂರ್ಣ ಕೈಬಿಡಬೇಕು. ಉಚಿತವಾಗಿ ಬಿತ್ತನೆ ಬೀಜ ಪೂರೈಸಬೇಕು. ರಸಗೊಬ್ಬರ ಕೀಟನಾಶಕಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲಾ ಕೃಷಿ ಚಟುವಟಿಕೆಗಳಿಗೂ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಖರೀದಿ ಕೇಂದ್ರದ ಮೂಲಕ ಖರೀದಿಸಲಾದ ಭತ್ತ, ಜೋಳ ಮತ್ತು ರಾಗಿ ಬಾಕಿಯನ್ನು ಕೂಡಲೇ ಪಾವತಿಸಬೇಕು. ಕಬ್ಬಿನ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿಯನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಪರಿಹಾರದ ಬಾಕಿ ಮತ್ತು ಬರ ಹಾಗೂ ಅತಿವೃಷ್ಟಿ ಪರಿಹಾರದ ಬಾಕಿಯನ್ನು ರೈತರ ಖಾತೆಗೆ ಜಮಾ ಮಾಡಬೇಕು.
ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ಡಾ| ಪ್ರಕಾಶ್ ಕಮ್ಮರಡಿ ನೀಡಿರುವ ವರದಿ ಅನ್ವಯ ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಹಣ್ಣು ತರಕಾರಿ ಬೆಳೆ ಬೆಳೆದು ಮಾರುಕಟ್ಟೆ ಇಲ್ಲದೆ ನಷ್ಟ ಅನುಭವಿಸಿದ್ದಾರೆ.
ಕೂಡಲೆ ಬೆಳೆ ಸಮಿಕ್ಷೆ ಮಾಡಿ ನಷ್ಟ ಪರಿಹಾರ ದೊರಕಿಸಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿದೆ. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶೀ ಟಿ. ನುಲೇನೂರು ಎಂ. ಶಂಕರಪ್ಪ, ಜಿಲ್ಲಾ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಕಾರ್ಯದರ್ಶಿ ಹುಣ್ಣಸೆಕಟ್ಟೆ ಕಾಂತರಾಜ್ ಮತ್ತಿತರರಿದ್ದರು.