ಭರಮಸಾಗರ: ಜಾತಿ, ಪಕ್ಷದ ಲೆಕ್ಕ ಹಾಕದೆ ಜನಸೇವೆ ಮಾಡುವ ವ್ಯಕ್ತಿಯನ್ನು ಚುನಾಯಿಸುವದರಿಂದ ಉತ್ತಮ ಅಭಿವೃದ್ಧಿ ಕಾಣಲು ಸಾಧ್ಯ ಎಂದು ರಾಜ್ಯ ರಸ್ತೆ ಸಂಸ್ಥೆ ಅಧ್ಯಕ್ಷ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೇಳಿದರು.
ಕಾಲಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೆರೆ ಸ್ವತ್ಛತೆ, ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ, ಆಶಾ, ಅಂಗವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ, ಉಚಿತ ತೊಗರಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವತಃ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಜನಪ್ರತಿನಿಧಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಿದೆ. ಓಟು ಹಾಕುವ ಒಂದು ಕ್ಷಣ ಜನರು ಚಿಂತಿಸಿ ಮತ ಚಲಾಯಿಸಬೇಕು.
ಕಾಲಗೆರೆ ಗ್ರಾಮದಲ್ಲಿನ ಕೆರೆ ಸ್ವತ್ಛತೆ, ಸಿಸಿ ರಸ್ತೆಗಳು, ಆಸ್ಪತ್ರೆ, ಹಾಸ್ಟಲ್ ಸ್ಥಾಪನೆಗೆ ಜನರು ಅರ್ಜಿ ಕೊಡದೆ ಇದ್ದರೂ ಸ್ವತಃ ಅರಿತು ಈ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ್ದೇನೆ ಎಂದರು.
ಬಡವರ ಬಗ್ಗೆ ಕರುಣೆಯಿರಬೇಕು. ಪ್ರೀತಿ, ವಿಶ್ವಾಸದಿಂದ ನನ್ನನ್ನು ಜನರು 40 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಹೊಸಪೇಟೆಯಿಂದ ಪಾವಗಡಕ್ಕೆ ಹೋಗುವ ಕುಡಿಯುವ ನೀರಿನ ಪೈಪ್‌ಲೈನ್‌ನಿಂದ ಭರಮಸಾಗರ ಹೋಬಳಿಯ ಹಲವು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 26 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.
ಕಾಕಬಾಳು ಗ್ರಾಮದ ಹತ್ತಿರ 10 ಎಕರೆ ಜಮೀನಿನಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜೋಗ ಜಲಪಾತದ ಶರಾವತಿ ವಿದ್ಯುತ್ ಉತ್ಪಾದನಾ ಘಟಕದಿಂದ ನೇರವಾಗಿ ವಿದ್ಯುತ್ ಅನ್ನು ಕಾಕಬಾಳು ವಿದ್ಯುತ್ ಘಟಕಕ್ಕೆ ಹರಿಸುವ ಮೂಲಕ ಸುತ್ತಲಿನ ಉಪ ವಿದ್ಯುತ್ ಘಟಕಗಳಿಗೆ ಪೂರೈಸುವ ಕೆಲಸ ಮಾಡಲಾಗುತ್ತದೆ. ಚಿಕ್ಕಜಾಜೂರು ಬಳಿ ಕೂಡ 250 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಘಟಕವನ್ನು ನಿರ್ಮಿಸಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಡಿ.ವಿ. ಶರಣಪ್ಪ, ಟಿಎಪಿಎಂಸಿ ಅಧ್ಯಕ್ಷ ಕೋಗುಂಡೆ ಮಂಜುನಾಥ್, ಬಿಜೆಪಿ ಮಂಡಲ್ ಅಧ್ಯಕ್ಷ ಶೈಲೇಶ್‌ಕುಮಾರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಹನುಮಂತಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷ ಗುರುಶಾಂತಪ್ಪ, ಜಂಟಿ ಕೃಷಿ ನಿರ್ದೇಶಕ ರಮೇಶ್‌ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್, ಕೃಷಿ ಅಧಿಕಾರಿಗಳಾದ ಶ್ರೀನಿವಾಸ್, ಎಂ.ಐ. ಪತ್ತಾರ್, ತಾಲೂಕು ಪಂಚಾಯತ್ ಸದಸ್ಯರಾದ ಕಾಲಗೆರೆ ಶೇಖರಪ್ಪ, ಎನ್.ಕಲ್ಲೇಶ್, ಭೀಮಣ್ಣ ಇತರರು ಇದ್ದರು.