Advertisement

ನೆನಪಿಡಿ, ಇನ್ನೂ ಕೊರೊನಾ ಹೋಗಿಲ್ಲ!

10:15 PM Jun 15, 2021 | Team Udayavani |

ಚಿತ್ರದುರ್ಗ: ಕೊರೊನಾ ಎರಡನೇ ಅಲೆ ಕಾರಣಕ್ಕೆ ಕಳೆದೊಂದು ತಿಂಗಳಿನಿಂದ ಮೌನ ಆವರಿಸಿದ್ದ ನಗರಕ್ಕೆ ಸೋಮವಾರ ಲಾಕ್‌ಡೌನ್‌ ಸಡಿಲಿಕೆಯಿಂದ ಜೀವಕಳೆ ಬಂದಿತ್ತು. ರಸ್ತೆಗಳಲ್ಲಿ ವಿಪರೀತ ವಾಹನಗಳ ಸಂಚಾರ, ವ್ಯಾಪಾರ ವಹಿವಾಟು, ಜನರಲ್ಲಿ ಹೊಸ ಉತ್ಸಾಹ ಕಂಡು ಬರುತ್ತಿತ್ತು.

Advertisement

ಕೋವಿಡ್‌ಸಂಪೂರ್ಣ ಹತೋಟಿಗೆ ಬಾರದಿದ್ದರೂ ಸರ್ಕಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಲಾಕ್‌ ಡೌನ್‌ ಸಡಿಲಿಕೆ ಮಾಡಿ ರುವುದರಿಂದ ಸಹಜವಾಗಿ ಎಲ್ಲೆಲ್ಲೂ ಜನಜಂಗುಳಿ ಕಾಣಿಸುತ್ತಿತ್ತು. ಜೂನ್‌ 21 ರವರೆಗೆ ಇನ್ನೂ ಲಾಕ್‌ಡೌನ್‌ ಮುಂದುವರೆದಿರುವುದರಿಂದ ಮಧ್ಯಾಹ್ನದೊಳಗೆ ಅಗತ್ಯ ವಸ್ತುಗಳನ್ನು ಖರೀದಿಸಬೇಕು ಎಂದು ಗ್ರಾಮೀಣ ಪ್ರದೇಶಗಳಿಂದ ಸಾಕಷ್ಟು ಜನ ನಗರ ಪ್ರದೇಶಗಳಿಗೆ ಆಗಮಿಸಿದ್ದರು.

ಜನರಿಗಿಲ್ಲ ಕೊರೊನಾ ಭಯ: ಜಿಲ್ಲಾಡಳಿತ ಲಾಕ್‌ ಡೌನ್‌ನಲ್ಲಿ ಕೊಂಚ ವಿನಾಯಿತಿ ನೀಡಿದ್ದನ್ನೇ ನೆಪ ಮಾಡಿಕೊಂಡು ಸಾವಿರಾರು ಜನರು ರಸ್ತೆಗಿಳಿದಿದ್ದರು. ಇದರಿಂದ ಹೊಳಲ್ಕೆರೆ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು. ಬೆಳಗ್ಗೆ 6 ರಿಂದ 10 ರವರೆಗೆ ಇದ್ದ ವಿನಾಯಿತಿ ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಣೆಯಾಗಿರುವುದು ಜನರಿಗಿಂತ ವ್ಯಾಪಾರಿಗಳಿಗೆ ಹೆಚ್ಚು ಖುಷಿ ತಂದಿತ್ತು.

ಜನರು ಸಾಮಾಜಿಕ ಅಂತರ ಮರೆತು ಗುಂಪು ಕಟ್ಟಿಕೊಂಡಿದ್ದರು. ಸಾಕಷ್ಟು ಮಂದಿ ಮಾಸ್ಕ್ ಇಲ್ಲದೆ ನೆಪಕ್ಕೆ ಎಂಬಂತೆ ಕರವಸ್ತ್ರ ಅಥವಾ ಟವೆಲ್‌ಗ‌ಳನ್ನು ಮುಖಕ್ಕೆ ಹಿಡಿದು ಓಡಾಡುತ್ತಿದ್ದರು. ಬಹುತೇಕ ಅಂಗಡಿ ಮತ್ತಿತರೆ ವ್ಯಾಪಾರ ಮಾಡುವ ಸ್ಥಳಗಳಲ್ಲಿ ಸ್ಯಾನಿಟೈಸರ್‌ ಇರಲೇ ಇಲ್ಲ.

ತರಕಾರಿ ವ್ಯಾಪಾರ ಜೋರು: ಇಷ್ಟು ದಿನ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನಕ್ಕೆ ಸೀಮಿತವಾಗಿದ್ದ ತರಕಾರಿ ವ್ಯಾಪಾರ ಸೋಮವಾರ ತುಸು ವಿಸ್ತಾರಗೊಂಡಿತ್ತು. ವಾಹನಗಳು, ತಳ್ಳು ಗಾಡಿಗಳಲ್ಲಿ ಕೂಡಾ ವ್ಯಾಪಾರ ಜೋರಾಗಿತ್ತು. ಗಾಂಧಿ  ವೃತ್ತ, ಜೆಸಿಆರ್‌ ಬಡಾವಣೆ, ದೊಡ್ಡಪೇಟೆ, ಚಿಕ್ಕಪೇಟೆ, ಕೆಳಗೋಟೆ ಸೇರಿದಂತೆ ಅಲ್ಲಲ್ಲಿ ತರಕಾರಿ ಮಾರಾಟ ಕಾಣಿಸುತ್ತಿತ್ತು.

Advertisement

ಹಳೇ ಮಾಧ್ಯಮಿಕ ಶಾಲಾ ಆವಣದಲ್ಲಂತೂ ಜನ ಜಾತ್ರೆಯಾಗಿತ್ತು. ಪೊಲೀಸರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನವಿ ಮಾಡಿದರೂ ಜನ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ದಿನಸಿ, ಕಟ್ಟಡ ನಿರ್ಮಾಣ, ಕನ್ನಡಕದ ಅಂಗಡಿ, ಮಾಂಸ ಮಾರಾಟಕ್ಕೂ ಅವಕಾಶ ಇರುವುದರಿಂದ ಕಬ್ಬಿಣ, ಸಿಮೆಂಟ್‌ ಅಂಗಡಿಗಳ ಬಳಿ ಜನರು ಜಮಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next