ಚಿತ್ರದುರ್ಗ: ಸಮಾಜಕಲ್ಯಾಣ ಇಲಾಖೆಯ ಮಾಜಿ ಸಚಿವನಾಗಿ ಭಿಟನೆಗೆ ಪ್ರೇರಣೆ ನೀಡುವುದಿಲ್ಲ. ಲಿಂಗತ್ವ ಅಲ್ಪಸಂಖ್ಯಾತರು ಸ್ವಂತ ಕಾಲ ಮೇಲೆ ನಿಲ್ಲಲು ನೆರವು ನೀಡುವುದಾಗಿ ಸಂಸದ ಎ. ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ಸಮಾಜಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ 47 ಜನ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿದರು. ಮಂಗಳಮುಖೀಯರ ಸಮಸ್ಯೆಗೆ ಸ್ಪಂದಿಸಿ ಅವರ ಸಂಕಷ್ಟಕ್ಕೆ ಮಿಡಿಯುವ ಉದ್ದೇಶದಿಂದ ದಿನಸಿ ಕಿಟ್ ನೀಡಿದ್ದೇವೆ.
ಲಾಕ್‌ಡೌನ್ ಸಂದರ್ಭದಲ್ಲಿ ಭಿಟನೆ ಇರಲಿಲ್ಲ, ಇದರಿಂದ ಜೀವನ ಕಷ್ಟ ಆಗಿತ್ತು. ಮನೆ ಇಲ್ಲ. ಬಾಡಿಗೆ ಕಟ್ಟಲು ಆಗುತ್ತಿಲ್ಲ. ವಾಸಕ್ಕೆ ಮನೆ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲ ಎಂಬ ಉದ್ದೇಶದಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ ಎಂದರು.
ಮಂಗಳಮುಖೀಯರ ಸಮಸ್ಯೆ ಆಲಿಸಿದ ಸಂಸದರು, ನಿವೇಶನ ನೀಡುವ ವ್ಯವಸ್ಥೆ ಖಂಡಿತ ಮಾಡುವೆ. ಸಂಘದ ಹೆಸರಿನಲ್ಲಿ ಮನವಿ ಸಲ್ಲಿಸಿ. ಲಾಕ್‌ಡೌನ್ ಬಳಿಕ ಸಭೆ ನಡೆಸಿ ಉದ್ಯೋಗ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸ್ವಯಂ ಉದ್ಯೋಗಕ್ಕೆ ಆಸಕ್ತಿ ಇರುವವರು ಮುಂದೆ ಬಂದರೆ ಸೌಲಭ್ಯ ಕಲ್ಪಿಸುತ್ತೇವೆ. ಭಿಟನೆ ಬಿಟ್ಟು ಹೊರಗೆ ಬರುವುದಾದರೆ ಬೆಂಬಲ ನೀಡುತ್ತೇವೆ. ನೀವು ಲೆಟರ್‌ಹೆಡ್ ನಲ್ಲಿ ಮನವಿ ಕೊಡಿ. ಟೈಲರಿಂಗ್, ಹಪ್ಪಳ ಮಾಡುವುದು ಸೇರಿದಂತೆ ಅನೇಕ ಉದ್ಯೋಗ ಮಾಡಬಹುದು. ನೆರವಿಗೆ ಸರ್ಕಾರದ ಅನುದಾನಕ್ಕೆ ಕಾಯುವುದಿಲ್ಲ, ಸ್ವಂತ ಹಣದಲ್ಲಿ ನೆರವು ನೀಡುವೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಚಳ್ಳಕೆರೆ ತಾಲೂಕು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಗುರುಮೂರ್ತಿ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ ಮತ್ತಿತರರು ಇದ್ದರು.