Advertisement

ಲಸಿಕೆ ವಿತರಣೆ ನಿರ್ಲಕ್ಷ್ಯಕ್ಕೆ ಕಿಡಿ

09:16 PM Jun 01, 2021 | Team Udayavani |

ಚಿತ್ರದುರ್ಗ: ಸಕಾಲಕ್ಕೆ ಕೋವಿಡ್‌ ಲಸಿಕೆ ನೀಡದೆ ಅನಗತ್ಯ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ನಗರದ ಬಾಲಭವನದ ಆವರಣದಲ್ಲಿರುವ ಲಸಿಕಾ ಕೇಂದ್ರದ ಎದುರು ಸಾರ್ವಜನಿಕರು ಆರೋಗ್ಯ ಇಲಾಖೆ ವಿರುದ್ಧ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬೆಳಗ್ಗೆ 7 ಗಂಟೆಯಿಂದಲೇ ನೂರಾರು ಮಂದಿ ಲಸಿಕಾ ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಆದರೆ ಆರೋಗ್ಯ ಇಲಾಖೆ ಅ ಧಿಕಾರಿಗಳು ಬೆಳಗ್ಗೆ 10 ರಿಂದ ಲಸಿಕೆ ವಿತರಣೆಗೆ ಸಮಯ ನಿಗ ದಿ ಮಾಡಿದ್ದರು. ಈ ವೇಳೆ 10 ಗಂಟೆಗೆ ಬರಬೇಕಾದ ಸಿಬ್ಬಂದಿ ತುಸು ತಡವಾಗಿ ಆಗಮಿಸಿದ್ದರು. ಇದರಿಂದ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‌ ಸೋಂಕು ಏರಿಕೆ ಹಾಗೂ ಲಸಿಕೆ ಕೊರತೆ ಬಗ್ಗೆ ಎದ್ದಿರುವ ಸುದ್ದಿಗಳ ಪರಿಣಾಮ ಲಸಿಕಾ ಕೇಂದ್ರದ ಮುಂದೆ ಬೆಳಗ್ಗೆ 8 ರಿಂದಲೇ ಯುವಕರು, ವಯಸ್ಸಾದವರು ಲಸಿಕೆ ಪಡೆಯಲು ಜಮಾಯಿಸಿದ್ದರು. ಲಾಕ್‌ಡೌನ್‌ ಕಾರಣಕ್ಕೆ ಬೆಳಗ್ಗೆಯೇ ಕೇಂದ್ರಕ್ಕೆ ಬಂದಿದ್ದೇವೆ. ಆದರೆ ಇಲ್ಲಿ ಹೇಳ್ಳೋರು, ಕೇಳ್ಳೋರು ಇಲ್ಲದಂತಾಗಿದೆ. ಸಮಯ ಹತ್ತಾದರೂ ಯಾರೊಬ್ಬರೂ ಇತ್ತ ಸುಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಷಯ ತಿಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಲಸಿಕೆ ಬರುತ್ತಿದೆ. ಇಲಾಖೆ ಸೂಚನೆಯಂತೆ 10 ಗಂಟೆಯಿಂದ ಲಸಿಕೆ ಹಾಕುತ್ತೇವೆ ಎಂದು ತಿಳಿಸಿದರೂ ಜನರು ಸಿಬ್ಬಂದಿಗಳ ಮೇಲೆ ಗಲಾಟೆ ಮಾಡಿದರು. ಬಳಿಕ 10:15ಕ್ಕೆ ಕೇಂದ್ರಕ್ಕೆ ನಾಲ್ವರು ಸಿಬ್ಬಂದಿಗಳು 100 ಜನರಿಗೆ ನೀಡುವಷ್ಟು ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡು ಆಗಮಿಸಿ ಲಸಿಕೆ ಹಾಕಿದರು. 45 ರಿಂದ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಯಿತು.

ಕೇಂದ್ರಕ್ಕೆ ಆಗಮಿಸಿದ್ದ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಇಲಾಖೆ ಸಿಬ್ಬಂದಿ ವಾಪಸ್ಸು ಕಳುಹಿಸಿದರು. ಸಂಜೆ 4ರ ವೇಳೆಗೆ ಒಟ್ಟು 80 ಜನಕ್ಕೆ ಲಸಿಕೆ ನೀಡಲಾಯಿತು ಎಂದು ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Advertisement

ಉಳಿದಂತೆ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯಾಷನಲ್‌ ಸ್ಕೂಲ್‌, ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ, ಬಾಲಭವನ ಹಾಗೂ ತಾಲೂಕಿನ ಎಂಟು ಕಡೆ ಲಸಿಕೆ ವಿತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next