ಚಿತ್ರದುರ್ಗ: ಜಿಲ್ಲೆಗೆ ಖಾಸಗಿ ಆಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪ್ರತಿ ನಿತ್ಯ 300 ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ 800 ಸೇರಿ 1100 ರೆಮ್ ಡೆಸಿವರ್ ಚುಚ್ಚುಮದ್ದು ಅಗತ್ಯವಿದೆ. ಇದಕ್ಕಿಂತಲೂ ಕಡಿಮೆ ಪೂರೈಕೆಯಾಗುತ್ತಿರುವುದರಿಂದ ಸಮಸ್ಯೆಯಾಗಿದೆ.
ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದು, ಪೂರೈಕೆಗೆ ಕ್ರಮ ವಹಿಸಲಾಗುತ್ತದೆ ಎಂದು ಸಮಾಜಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಮಂಗಳವಾರ ಶಾಸಕರು ಹಾಗೂ ಜಿಲ್ಲಾ ಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿ ಕಾರಿಗಳೊಂದಿಗೆ ನಡೆಸಿದ ಕೋವಿಡ್ ನಿರ್ವಹಣಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾಸ್ಪತ್ರೆಯಲ್ಲಿ ಈಗಿರುವ 175 ಬೆಡ್‌ಗಳ ಜೊತೆಗೆ 200 ಹೆಚ್ಚುವರಿ ಬೆಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಪ್ರತಿನಿತ್ಯ 6 ಸಾವಿರ ಲೀಟರ್ ಆಕ್ಸಿಜನ್ ಬೇಕಾಗುತ್ತದೆ. ಇತರೆ ಸಾರ್ವಜನಿಕ ಆಸ್ಪತ್ರೆ, ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್‌ಗಳು ಸೇರಿದಂತೆ ಒಟ್ಟು 16,154 ಲೀಟರ್ ಆಕ್ಸಿಜನ್ ಅಗತ್ಯವಿದ್ದು, ಸುಮಾರು 15,000 ಲೀಟರ್ ಪೂರೈಕೆಯಾಗುತ್ತಿದೆ ಎಂದರು.
ಎಸ್‌ಡಿಆರ್‌ಎಫ್‌ನಡಿ ಜಿಲ್ಲೆಗೆ 20 ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇದು ನಿರ್ಮಾಣವಾಗಲಿದೆ. ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿನ ಸ್ಟೀಲ್ ಇಂಡಸ್ಟ್ರೀಸ್‌ಗಳಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಉತ್ತೇಜಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ವೇದಾಂತ ಕಂಪನಿಯಿಂದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ 100 ಹಾಸಿಗೆ ಸಾಮರ್ಥ್ಯದ ಟೆಂಟ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತಿದೆ. ಆದಷ್ಟು ಬೇಗ ಜನಸೇವೆಗೆ ಲಭ್ಯವಾಗಲಿದೆ ಎಂದ ಸಚಿವರು, ಜಿಲ್ಲೆಯ ಜನರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಟಿ. ರಘುಮೂರ್ತಿ, ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಜಿಲ್ಲಾ ರಕ್ಷಣಾ ಧಿಕಾರಿ ಜಿ. ರಾಧಿ ಕಾ, ಅಪರ ಜಿಲ್ಲಾ ಧಿಕಾರಿ ಇ. ಬಾಲಕೃಷ್ಣ, ಡಿಎಚ್‌ಒ ಡಾ| ಸಿ.ಎಲ್. ಪಾಲಾಕ್ಷ, ಜಿಲ್ಲಾ ಸರ್ಜನ್ ಡಾ| ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ರಂಗನಾಥ್ ಭಾಗವಹಿಸಿದ್ದರು.