ಚಿತ್ರದುರ್ಗ: ಜೀವ, ಜೀವನ ಮತ್ತು ಜಗತ್ತು ಅತ್ಯಂತ ಸಂದಿಗ್ಧ, ಸಂಕೀರ್ಣ ಸ್ಥಿತಿ ತಲುಪುತ್ತಿದೆ. ಕಣ್ಣಿಗೆ ಕಾಣದಿರುವ ವೈರಾಣು ಜಗತ್ತಿನಲ್ಲಿ ಎಲ್ಲರ ಬದುಕಿನಲ್ಲಿ ತಳಮಳ ಉಂಟುಮಾಡಿದೆ. ಯಾವಾಗ, ಯಾರಿಗೆ ಬರುತ್ತದೆಯೋ ಹೇಳಲು ಬರುವುದಿಲ್ಲ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗತ್ತನ್ನು ಮೀರಿದ ಧರ್ಮ ಒಂದಿದೆ. ಅದು ಕಾಲ ಧರ್ಮ. ಮಾನವ ಬದುಕಿಗೆ ಹಲವಾರು ಕಟ್ಟುಪಾಡುಗಳಿವೆ. ಮಾನವನ ಬದುಕಿಗೆ ಕೊರೊನಾ ಎನ್ನುವುದು ಕಟ್ಟುಪಾಡಿಗೆ ಒಳಗಾಗುವಂತೆ ಮಾಡುತ್ತಿದೆ. ಇದು ಯಾವಾಗ ಬರುತ್ತದೆ ಎಂದು ಗೊತ್ತಿರಲಿಲ್ಲ. ಜನನ ಹೇಳಿ ಕೇಳಿ ಬರುತ್ತದೆ, ಆದರೆ ಮರಣ ಯಾರನ್ನೂ ಹೇಳುವುದಿಲ್ಲ, ಕೇಳುವುದಿಲ್ಲ. ಜಗತ್ತಿನಲ್ಲಿ ಎಲ್ಲ ಜೀವರಾಶಿಗಳು ಸಂತಾನ ಉತ್ಪತ್ತಿ ಮಾಡುತ್ತವೆ. ಸಂತಾನದ ಅಭಿವೃದ್ಧಿಗಾಗಿ ಕಲ್ಯಾಣದ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗದಲ್ಲಿ ಜನರಿಗೆ ಅನುಕೂಲವಾಗಲೆಂದು ಸರ್ವ ಧರ್ಮ ಸಾಮೂಹಿಕ ಕಲ್ಯಾಣ ಮಹೋತ್ಸವ ಆರಂಭಿಸ ಲಾಗಿದೆ. ಮುರುಘಾ ಮಠದ ಜನಪ್ರಿಯ ಕಾರ್ಯ ಕ್ರಮಗಳಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ. ಕಾರಣ ಇದಕ್ಕೆ ಒಂದು ಬದ್ಧತೆ ಮತ್ತು ಪ್ರಬುದ್ಧತೆ ಇದೆ. ಇದೊಂದು ತಪೋಭೂಮಿ ಎಂದು ಬಣ್ಣಿಸಿದರು.
ಕೊರೊನಾ ಕಾಲಘಟ್ಟದಲ್ಲಿ ಎಲ್ಲರೂ ಜಾಗರೂಕರಾಗಿರಬೇಕು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಬಳಸಿ ಸುರಕ್ಷಿತವಾಗಿರಬೇಕು. ಕೊರೊನಾ ಕಾಯಿಲೆ ಬಗ್ಗೆ ಎಚ್ಚರವಿರಲಿ, ಭಯ ಬೇಡ ಎಂದು ತಿಳಿಸಿದರು. ಹೆಬ್ಟಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ 31 ವರ್ಷಗಳಿಂದ ನಿರಂತರವಾಗಿ ನಡೆಸುತ್ತ ಬಂದಿದ್ದಾರೆ.
ಮನೆಯಲ್ಲಿ ಮದ್ದು ಮಾಡಿಕೊಂಡು ಕೊರೊನಾ ರೋಗ ಬಾರದಂತೆ ನೋಡಿಕೊಳ್ಳಬೇಕು. ಅರಿಶಿನ, ಶುಂಠಿ, ಕಾಳುಮೆಣಸು, ಅಮೃತಬಳ್ಳಿ, ತುಳಸಿ ಮೊದಲಾದವುಗಳನ್ನು ಸೇವಿಸಬೇಕು. ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ರೋಗದಿಂದ ನಾವು ದೂರವಿರಬೇಕು. ನಮ್ಮ ಹಿರಿಯರು ಇಂತಹ ಗಿಡಮೂಲಿಕೆಗಳ ಪದ್ಧತಿಯನ್ನು ಅನುಸರಿಸುತ್ತಿದ್ದರು ಎಂದರು.
ಕೋವಿಡ್ ನಿಯಮ ಪಾಲಿಸಿಕೊಂಡು 12 ಜೋಡಿಗಳ ವಿವಾಹ ನೆರವೇರಿಸಲಾಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಜ್ಞಾನಮೂರ್ತಿ ಸ್ವಾಗತಿಸಿದರು.