ಮೊಳಕಾಲ್ಮೂರು: ಕೊರೊನಾ ಸೋಂಕಿತರು ಮತ್ತು ಸಂಪರ್ಕದಲ್ಲಿರುವವರನ್ನು ಐಸೋಲೇಷನ್ ಮಾಡಿದ್ದಲ್ಲಿ ಕೊರೊನಾ ಪ್ರಮಾಣ ನಿಯಂತ್ರಿಸಬಹುದು ಎಂದು ಉಪ ವಿಭಾಗಾ ಧಿಕಾರಿ ಪ್ರಸನ್ನಕುಮಾರ್ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕೊರೊನಾ ಕುರಿತು ನಡೆದ ಅಧಿ ಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೊದಲಿನ ಕೊರೊನಾ ಅಲೆಯ ಸಂದರ್ಭದಲ್ಲಿ ಸೋಂಕಿತರು ಮತ್ತು ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿತ್ತು. ಆದರೆ ಈಗ ಯಾವ ಕ್ವಾರಂಟೈನ್ ಮಾಡಲಾಗುತ್ತಿಲ್ಲವಾದ್ದರಿಂದ ಕೊರೊನಾ ಪಾಸಿಟಿವ್ ಗಳ ಪ್ರಮಾಣ ಹೆಚ್ಚಾಗಲಿದೆ. ಕೊರೊನಾ ಪಾಸಿಟಿವ್ ಬಂದವರ ಬಗ್ಗೆ ತಾಲೂಕಿನ ಬಿಎಲ್‌ಒಗಳಿಗೆ ಮಾಹಿತಿ ನೀಡಿ ಸ್ಥಳೀಯ ಆಶಾ ಕಾರ್ಯಕರ್ತೆಯರ ಮೂಲಕ ಐಸೋಲೇಷನ್ ಮಾಡಿಸಿ ಕೊರೊನಾ ಹರಡದಂತೆ ನಿಯಂತ್ರಿಸಬೇಕು. ಬಿಎಲ್‌ಒಗಳು ಸೆಕೆಂಡರಿ ಸಂಪರ್ಕದ ಬಗ್ಗೆ ತಿಳಿದು ನಿಯಂತ್ರಿಸಬಹುದು.
ಸಂಪರ್ಕದಲ್ಲಿರುವವರ ಬಗ್ಗೆ ಪಾಸಿಟಿವ್ ಸೋಂಕಿತರೆ ನೀಡಬೇಕಾಗಿದೆ. ಇಲ್ಲವಾದಲ್ಲಿ ಸೋಂಕಿತರು ಆಸ್ಪತ್ರೆಗೆ ಬರುವಾಗ ಆಧಾರ ಕಾರ್ಡ್ ಮೂಲಕ ತಂದಲ್ಲಿ ಸೂಕ್ತ ಮಾಹಿತಿ ನೀಡಲು ಸಹಕಾರಿಯಾಗಲಿದೆ. ಕೊರೊನಾ ಪಾಸಿಟಿವ್ ಮತ್ತು ನೆಗೆಟಿವ್ ಮಾಹಿತಿ ಪಡೆಯಲು ಗಂಟಲು ದ್ರವ ಜಿಲ್ಲಾ ಕೇಂದ್ರಕ್ಕೆ ಕಳುಹಿಸಬೇಕಾಗಿದೆ. ಅಗತ್ಯವಿದ್ದಲ್ಲಿ ವಾಹನದ ಸೌಲಭ್ಯ ಕಲ್ಪಿಸಲಾಗುವುದು. ಕೊರೊನಾ ಪಾಸಿಟಿವ್ ಹೊಂದಿರುವವರನ್ನು ನಿತ್ಯವೂ ಅವರ ಆರೋಗ್ಯದ ಬಗ್ಗೆ ಗಮನ ಹರಿಸಿ ಮಾಹಿತಿ ನೀಡಬೇಕಾಗಿದೆ. ಹಾಗೆಯೇ ತಾಲೂಕಿನಲ್ಲಿ ಕೊರೊನಾ ಹರಡದಂತೆ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ತಾಲೂಕಿನ ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಹೊರಗಡೆಯಿಂದ ಬರುವವರನ್ನು ಪರೀಕ್ಷಿಸಿ ಕೊರೊನಾ ಹರಡದಂತೆ ನಿಯಂತ್ರಿಸಬಹುದಾಗಿದೆ. ತಾಲೂಕಿನ ಆಸ್ಪತ್ರೆಗಳಲ್ಲಿರುವ ಬೆಡ್‌ಗಳಿಂಗಿಂತಲೂ ಹೆಚ್ಚಿನ ಬೆಡ್‌ಗಳಿಗಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿ ಕನಿಷ್ಠ ಸುಮಾರು 500 ಜನರಿಗೆ ಐಸೋಲೇಷನ್ ಸೌಲಭ್ಯ ಕಲ್ಪಿಸಬೇಕಾಗಿದೆ. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಂಡು ಕೊರೊನಾ ಹರಡದಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕೊರೊನಾ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದು ಮಾರ್ಗ ಸೂಚಿಯಂತೆ ಶ್ರಮಿಸಲಾಗುವುದು ಎಂದರು. ತಾಲೂಕು ಆರೋಗ್ಯಾ ಧಿಕಾರಿ ಡಾ.ಸುಧಾ ಮಾತನಾಡಿ, ತಾಲೂಕಿನಲ್ಲಿ ಕೊರೊನಾ ಹರಡದಂತೆ ತಡೆಯಲು ನಿಗ ದಿತ ತಂಡ ರಚಿಸಿ ಮಾಹಿತಿ ಪಡೆದು ಕಾರ್ಯ ನಿರ್ವಹಿಸಲಾಗುವುದು. ಪಟ್ಟಣದ ನೂರು ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 51 ಬೆಡ್ ಮೀಸಲಿಟ್ಟಿದ್ದು, ಅವಶ್ಯವಿದ್ದಲ್ಲಿ ಆದರ್ಶ ಶಾಲೆ ಮತ್ತು ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. ನಿತ್ಯವೂ ಕೊರೊನಾ ಪಾಸಿಟಿವ್ ಮತ್ತು ನೆಗೆಟಿವ್ ಮಾಹಿತಿಗಾಗಿ ಗಂಟಲು ದ್ರವ ಸಂಗ್ರಹಿಸಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿ ಮಾಹಿತಿ ಪಡೆದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ರೆಮ್ ಡಿಸಿವಿರ್ ಲಸಿಕೆಯೂ ಸಹ ಕೊರತೆಯಿರುವುದಿಲ್ಲ. ಕೋವಿಡ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮರ್ಪಕವಾಗಿದ್ದು, ಅಗತ್ಯವಿದ್ದಲ್ಲಿ ಮಾತ್ರ ಆಕ್ಸಿಜನ್ ನೀಡಲಾಗುವುದು.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂ.ಕೆ.ಬಸವರಾಜ್ ಮಾತನಾಡಿದರು. ತಾಪಂನ ನಂದೀಶ್, ಶಿರಸ್ತೇದಾರ ಏಳುಕೋಟಿ, ಕ್ಷೇತ್ರಶಿಕ್ಷಣಾ ಧಿಕಾರಿ ಯುವರಾಜ್ ನಾಯ್ಕ, ಬಿ.ಆರ್.ಸಿ ಹನುಮಂತಪ್ಪ, ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಸವಿತಾ, ರಾಂಪುರ ಪಿ.ಎಸ್.ಐ ಗುಡ್ಡಪ್ಪ, ತಾಲೂಕು ಕಚೇರಿ ಸಿಬ್ಬಂದಿ ಮಂಜುನಾಥ ಹಾಗೂ ವಿವಿಧ ಇಲಾಖಾಧಿ ಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.