Advertisement

ಸರಗಳ್ಳರ ಬಂಧನ: 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ-ಸ್ವತ್ತು ವಶ

09:39 PM Jun 21, 2021 | Team Udayavani |

ಚಿತ್ರದುರ್ಗ: ನಗರದಲ್ಲಿ ಸರಗಳ್ಳತನ ಮಾಡುತ್ತಾ ಕೆಲ ದಿನಗಳಿಂದ ತಲೆನೋವಾಗಿದ್ದ ಆರೋಪಿಗಳ ಪೈಕಿ ಇಬ್ಬರನ್ನು ನಗರ ಠಾಣೆ ಪೊಲೀಸರು ಬಂಧಿ ಸಿದ್ದಾರೆ. ಇದೇ ವೇಳೆ ಕಳುವು ಮಾಡಿದ ಆಭರಣಗಳನ್ನು ಖರೀ ದಿ ಮಾಡುತ್ತಿದ್ದ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಜಿ. ರಾಧಿಕಾ ತಿಳಿಸಿದರು.

Advertisement

ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದ ಉಮೇಶ (22), ಉದಯ್‌ ಕುಮಾರ್‌ (21) ಹಾಗೂ ಕೀರ್ತಿ (22) ಸರಗಳ್ಳತನ ಮಾಡುತ್ತಿದ್ದ ಆರೋಪಿಗಳು. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು, ಕೀರ್ತಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಕಳ್ಳತನದ ಆಭರಣಗಳನ್ನು ಸ್ವೀಕರಿಸುತ್ತಿದ್ದ ಜ್ಯುವೆಲರ್ಸ್‌ ಮಾಲೀಕ ವಿನಯ್‌, ಮತ್ತೋರ್ವ ವ್ಯಕ್ತಿ ಯಶವಂತ್‌ ಎಂಬುವರನ್ನು ದಸ್ತಗಿರಿ ಮಾಡಲಾಗಿದೆ. ಬಂಧಿತರಿಂದ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ವಾಹನ ಸೇರಿದಂತೆ ಸುಮಾರು 10 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದರು.

ಒಂಟಿ ಹೆಣ್ಣುಮಕ್ಕಳೇ ಟಾರ್ಗೆಟ್‌: ಮೂವರು ಆರೋಪಿತರು ಕಳೆದ ಆರು ತಿಂಗಳಿನಿಂದ ಚಿತ್ರದುರ್ಗ ನಗರ ಮತ್ತು ಹೊರವಲಯದ ಪ್ರಮುಖ ರಸ್ತೆಗಳಲ್ಲಿ ಬೈಕಿನಲ್ಲಿ ಒಂಟಿ ಪ್ರಯಾಣ ಮಾಡುವ ಹೆಣ್ಣುಮಕ್ಕಳನ್ನು ಟಾರ್ಗೆಟ್‌ ಮಾಡುತ್ತಿದ್ದರು. ಅವರನ್ನು ಬೈಕಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಸರಗಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಈ ಬಗ್ಗೆ ಚಿತ್ರದುರ್ಗ ನಗರ ಠಾಣೆಯಲ್ಲಿ 3, ಬಡಾವಣೆ ಠಾಣೆಯಲ್ಲಿ 2 ಹಾಗೂ ಗ್ರಾಮಾಂತರ ಠಾಣೆಯಲ್ಲಿ 3 ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಆರೋಪಿತರಿಂದ 200 ಗ್ರಾಂ ತೂಕದ ಬಂಗಾರದ ಸರ, ಕೈ ಚೈನುಗಳು ಹಾಗೂ ಒಂದು ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಪ್ರಮುಖ ಆರೋಪಿ ಉಮೇಶ ಪ್ರತಿಷ್ಟಿತ ಕುಟುಂಬದವನಾಗಿದ್ದು ಜೂಜಾಟಕ್ಕಾಗಿ ಸರಗಳ್ಳತನ ಆರಂಭಿಸಿದ್ದ. ಕೆಲವೊಮ್ಮೆ ಒಬ್ಬಂಟಿಗನಾಗಿ, ಮತ್ತೆ ಕೆಲವೊಮ್ಮೆ ತನ್ನ ಸ್ನೇಹಿತರಾದ ಉದಯ್‌ಕುಮಾರ್‌ ಮತ್ತು ಕೀರ್ತಿ ಜತೆಗೂಡಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹಾಲಿಂಗ ಬಿ. ನಂದಗಾವಿ, ಡಿವೈಎಸ್ಪಿ ಎಸ್‌. ಪಾಂಡುರಂಗ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next