ಕೆ.ಎಸ್. ರಾಘವೇಂದ್ರ
ಚಳ್ಳಕೆರೆ: ತಾಲೂಕಿನಲ್ಲಿ ಟೊಮ್ಯಾಟೋವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ ಮಾರುಕಟ್ಟೆ ಸೌಲಭ್ಯ ಇಲ್ಲದ್ದರಿಂದ ಕೋಲಾರ ಸೇರಿದಂತೆ ದೂರದ ನಗರ ಪ್ರದೇಶಗಳಿಗೆ ಟೊಮ್ಯಾಟೋ ಕಳುಹಿಸಿ ಮಾರಾಟ ಮಾಡುವ ಪರಿಸ್ಥಿತಿ ಇತ್ತು. ಇದರಿಂದ ಬೆಳೆಗಾರರಿಗೆ ಅನಾನುಕೂಲವಾಗುತ್ತಿರುವುದನ್ನು ಮನಗಂಡ ಇಬ್ಬರು ವರ್ತಕರು ತಮ್ಮದೇ ಖರ್ಚಿನಲ್ಲಿ ಟೊಮ್ಯಾಟೋ ಖರೀದಿ ಕೇಂದ್ರ ಆರಂಭಿಸಿದ್ದಾರೆ.
ಸಾವಿರಾರು ರೂ. ಸಾಗಾಣಿಕೆ ವೆಚ್ಚ ನೀಡಿ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದ ಟೊಮ್ಯಾಟೋ ಬೆಳೆಗಾರರು ಖರೀದಿ ಕೇಂದ್ರ ಆರಂಭದಿಂದ ಸಂತಸಗೊಂಡಿದ್ದಾರೆ. ಪ್ರತಿನಿತ್ಯ ನೂರಾರು ಗ್ರಾಮಗಳಿಂದ ಗುಣಮಟ್ಟದ ಟೊಮ್ಯಾಟೋದ ಸಾವಿರಾರು ಬಾಕ್ಸ್‌ಗಳನ್ನು ಕೋಲಾರದ ಮಾರುಕಟ್ಟೆಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಕೆಲವೊಮ್ಮೆ ಉತ್ತಮ ಬೆಲೆ ದೊರೆತರೂ ಹೆಚ್ಚಿನ ಲಾಭವಾಗುತ್ತಿರಲಿಲ್ಲ.
ವಾಹನ ಬಾಡಿಗೆಯನ್ನೂ ಪಾವತಿಸಲಾಗದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ ವೆಂಕಟೇಶ ರೆಡ್ಡಿ ಹಾಗೂ ಅನಂತಪುರದ ಗುರುಮೂರ್ತಿ ಚಿಕ್ಕಮ್ಮನಹಳ್ಳಿ ಬಳಿ ವಿಶಾಲವಾದ ಶೆಡ್ ನಿರ್ಮಿಸಿ ಅಲ್ಲಿ ರೈತರಿಂದ ಟೊಮ್ಯಾಟೋ ಖರೀದಿಸುತ್ತಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಖರೀದಿದಾರ ವೆಂಕಟೇಶ ರೆಡ್ಡಿ, ಭಾನುವಾರ ನಾವು ಖರೀದಿ ಕೇಂದ್ರ ಆರಂಭಿಸಿದ್ದೇವೆ.
ಈ ಸುದ್ದಿ ತಿಳಿದ ಸುತ್ತಮುತ್ತಲಿನ 100ಕ್ಕೂ ಹೆಚ್ಚು ಟೊಮ್ಯಾಟೋ ಬೆಳೆಗಾರರು ಉತ್ಸಾಹದಿಂದ ಟೊಮ್ಯಾಟೋ ಮಾರಾಟ ಮಾಡಿದ್ದಾರೆ. ಕೇವಲ ಎರಡೇ ದಿನದಲ್ಲಿ 5600 ಬಾಕ್ಸ್ ಟೊಮ್ಯಾಟೋ ಚಳ್ಳಕೆರೆ, ಜಗಳೂರು, ಕೂಡ್ಲಗಿ, ಹೊಸಪೇಟೆ, ಬಳ್ಳಾರಿ, ಹಿರಿಯೂರು, ಚಿತ್ರದುರ್ಗ, ದಾವಣಗೆರೆ, ಹೊಸದುರ್ಗ, ಹೊಳಲ್ಕೆರೆ ಮೊದಲಾದ ಕಡೆಗಳಿಂದ ಬಂದಿದೆ. ಕೋಲಾರಕ್ಕೆ ತೆರಳಿದರೆ 10 ರಿಂದ 12 ಸಾವಿರ ರೂ. ಬಾಡಿಗೆ ಹಾಗೂ ಇನ್ನಿತರ ವೆಚ್ಚವಾಗುತ್ತಿತ್ತು. ಆದರೆ ಈಗ ಬಾಕ್ಸ್‌ಗೆ 100 ರಿಂದ 200 ರೂ. ದೊರೆತರೂ ರೈತರಿಗೆ ಏನಿಲ್ಲ ಎಂದರೂ 15 ರಿಂದ 20 ಸಾವಿರ ರೂ. ಲಾಭವಾಗುತ್ತಿದೆ. ವಾಹನ ವೆಚ್ಚ ಹಾಗೂ ಅನಗತ್ಯ ಖರ್ಚು ಉಳಿಯುತ್ತದೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಸ್ಥಳೀಯವಾಗಿಯೇ ಟೊಮ್ಯಾಟೋ ಖರೀದಿ ಕೇಂದ್ರ ಆರಂಭಗೊಂಡಿದ್ದರಿಂದ ಬೆಳೆಗಾರರಿಗೆ ಅನುಕೂಲವಾಗುತ್ತಿದೆ. ಇಬ್ಬರು ವರ್ತಕರ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಇದು ಹೀಗೆಯೇ ಮುಂದುವರೆಯಬೇಕಿದೆ.