Advertisement

ಶ್ರೀಕೃಷ್ಣನ ತತ್ವಾದರ್ಶ ಪಾಲಿಸಿ: ಜಯಮ್ಮ

12:30 PM Aug 24, 2019 | Team Udayavani |

ಚಿತ್ರದುರ್ಗ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಗೊಲ್ಲರಹಟ್ಟಿಗಳಲ್ಲಿ ಮನೆ ಮಾಡಿರುವ ಮೂಢ ನಂಬಿಕೆಗಳನ್ನು ಹೋಗಲಾಡಿಸಬಹುದು ಎಂದು ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೊಲ್ಲ ಸ್ತ್ರೀಯರಿಗೆ ಮುತ್ತೈದೆ ಭಾಗ್ಯ ಕಲ್ಪಿಸಿ, ಮೂಢನಂಬಿಕೆಯನ್ನು ಹೋಗಲಾಡಿಸಿದ ದೇವತಾ ಮನುಷ್ಯ ಶ್ರೀಕೃಷ್ಣ. ಹದಿನಾರು ಸಾವಿರ ಹೆಂಡತಿಯರು ಇದ್ದಿದ್ದು, ಶ್ರೀಕೃಷ್ಣನ ಇಚ್ಚೆಯಿಂದಲ್ಲ, ಆ ಎಲ್ಲ ಸ್ತ್ರೀಯರು ಸ್ವಯಂ ಪ್ರೇರಣೆಯಿಂದ ಶ್ರೀಕೃಷ್ಣ ತನ್ನ ಗಂಡನೆಂದು ಒಪ್ಪಿಕೊಂಡಿದ್ದರಿಂದ ಎಂದರು.

ಜಿಲ್ಲಾಧಿಕಾರಿ ಆರ್‌. ವಿನೋತ್‌ಪ್ರಿಯಾ ಮಾತನಾಡಿ, ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಅನುಸರಿಸಿದ್ದ ರಾಜಕೀಯ ನೀತಿ, ಧರ್ಮ ಪಾಲನೆ ತತ್ವಗಳು ಇಂದಿನ ಕಾಲಕ್ಕೂ ಪ್ರಸ್ತುತ ಎಂದು ಅಭಿಪ್ರಾಯಪಟ್ಟರು.

ಮಹನೀಯರ ಜಯಂತಿಗಳನ್ನು ಕೇವಲ ಜಾತಿ ಆಧಾರಿತವಾಗಿ ಕಾಣದೇ, ಅವರ ಜೀವನ ಶೈಲಿ, ಆಡಳಿತ ವ್ಯವಸ್ಥೆ, ರಾಜಕೀಯ ನೀತಿ ಹಾಗೂ ನ್ಯಾಯ ಸಮ್ಮತವಾದ ಅಂಶಗಳನ್ನು ಅರಿತು, ಮೈಗೂಡಿಸಿಕೊಂಡಾಗ ಆಚರಣೆಗೆ ಸಾರ್ಥಕತೆ ಸಿಗುತ್ತದೆ ಎಂದರು.

Advertisement

ಜಿಪಂ ಸಿಇಒ ಸಿ. ಸತ್ಯಭಾಮ ಮಾತನಾಡಿ, ಶ್ರೀಕೃಷ್ಣನನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವುದು ತರವಲ್ಲ. ಅಖಂಡ ಭಾರತಕ್ಕೆ ಶ್ರೀಕೃಷ್ಣನ ನೀತಿಗಳು ಉಪಯುಕ್ತವಾಗಿವೆ. ಸಮಾಜದಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ಸೇರಿದಂತೆ ಸಮಾಜ ಸುಧಾರಕರನ್ನು ಒಂದು ಜಾತಿಗೆ ಮೀಸಲಿಡಲಾಗಿದೆ. ಎಲ್ಲಾ ಜನಾಂಗದವರೂ ಒಪ್ಪಿಕೊಳ್ಳಲೇ ಬೇಕಾದ ಕೊಡುಗೆಗಳನ್ನು ಮಹನೀಯರು ನೀಡಿದ್ದಾರೆ. ಅವರಂತೆಯೇ ಶ್ರೀಕೃಷ್ಣ ಒಂದು ಜಾತಿಗೆ ಒಳ್ಳೆಯದನ್ನು ಮಾಡಿದವನಲ್ಲ. ಇಡೀ ಮನುಕುಲಕ್ಕೆ ಉಪಕಾರ ಮಾಡಿದ್ದಾನೆ. ಶ್ರೀಕೃಷ್ಣ ಒಂದು ಬ್ರಹ್ಮಾಂಡ, ಮನುಕುಲಕ್ಕೆ ಚೈತನ್ಯವಿದ್ದಂತೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಪರಮೇಶ್ವರಪ್ಪ, ಶ್ರೀಕೃಷ್ಣನು ಕಾರಾಗೃಹದಲ್ಲಿ ಜನಿಸಿ, ಗೋಕುಲದಲ್ಲಿ ಬೆಳೆದು, ದ್ವಾರಕ ನಗರದಲ್ಲಿ ಜೀವನ ಕಟ್ಟಿಕೊಂಡನು. ಶ್ರೀಕೃಷ್ಣ ಗೊಲ್ಲರಹಟ್ಟಿಯಲ್ಲಿ ಗೋಪಿಕಾ ಸ್ತ್ರೀಯರೊಂದಿಗೆ ಬೆಳೆದು, ಗೊಲ್ಲರಿಗೆ ಪ್ರೀತಿ ಪಾತ್ರನಾಗಿದ್ದ, ಗೋವರ್ಧನಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿ ಪ್ರವಾಹದಲ್ಲಿ ಸಿಲುಕಿದ್ಧ ಜನರನ್ನು ರಕ್ಷಿಸಿ, ಕಷ್ಟದ ವೇಳೆ ನಾನಿದ್ದೇನೆ ಎಂಬುದನ್ನು ತೋರಿಸಿಕೊಟ್ಟ ಎಂದು ಸ್ಮರಿಸಿದರು.

ಶ್ರೀಕೃಷ್ಣ ರಚಿಸಿದ ಭಗವದ್ಗೀತೆ 40 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಗಾಂಧೀಜಿ ಸಹ ಭಗವದ್ಗೀತೆಯಿಂದಲೇ ಪ್ರಭಾವಿತನಾಗಿ ಜಗತ್ತಿಗೆ ಮಹಾತ್ಮನಾಗಿದ್ದಾರೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌, ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಮಾಜಿ ಶಾಸಕ ಉಮಾಪತಿ, ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಮಹಾಲಿಂಗಪ್ಪ, ಕಾರ್ಯದರ್ಶಿ ಆನಂದಪ್ಪ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next