Advertisement

ಆಂಧ್ರದಿಂದ ನೀರು ತರುವ ಸ್ಥಿತಿ!

12:39 PM May 17, 2019 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬರ ಮುಂದುವರೆದಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಾಗಾಗಿ ಜಿಲ್ಲೆಯ ಗಡಿ ಭಾಗದ ಗ್ರಾಮಗಳ ಜನರು ನೆರೆಯ ಆಂಧ್ರಪ್ರದೇಶದ ಹಳ್ಳಿಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ದೇಶದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವ ರಾಜ್ಯಗಳಲ್ಲಿ ರಾಜಸ್ಥಾನ ಮೊದಲ ಸ್ಥಾನ ಪಡೆದರೆ, ಕರ್ನಾಟಕ ಎರಡನೆಯದಾಗಿದೆ. ಕರ್ನಾಟಕದಲ್ಲಿ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಚಿತ್ರದುರ್ಗ ಜಿಲ್ಲೆ ಮೊದಲ ಸ್ಥಾನದಲ್ಲಿದೆ.

ಜಿಲ್ಲೆಯ ಆರು ತಾಲೂಕುಗಳು ಭೀಕರ ಬರಕ್ಕೆ ತುತ್ತಾಗಿವೆ. ಸತತ ಹತ್ತು ವರ್ಷಗಳಿಂದ ಜಿಲ್ಲೆ ಮಳೆಯ ಕೊರತೆ ಎದುರಿಸುತ್ತಿದೆ. ಅಂತರ್ಜಲ ಮಟ್ಟ ಕುಸಿತದಿಂದಾಗಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಜಿಲ್ಲೆಯ ಕೆಲ ಭಾಗದಲ್ಲಿ ಬರುವ ಅಷ್ಟಿಷ್ಟು ನೀರು ಪೂರೈಕೆ ಮಾಡಲು ತಾಂತ್ರಿಕ ದೋಷಗಳು ಅಡ್ಡಿಯಾಗುತ್ತಿವೆ. ವಿದ್ಯುತ್‌ ಪೂರೈಕೆ ಸಮರ್ಪಕವಾಗಿ ಆಗದೇ ಇರುವುದರಿಂದ ಮೋಟಾರ್‌ ಪಂಪ್‌ ಸುಡುವುದು, ಕೊಳವೆಬಾವಿ ದುರಸ್ತಿಗೆ ಬರುತ್ತಿವೆ. ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿರುವುದರಿಂದ ನೂರಾರು ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಹಳ್ಳಿಗಳಲ್ಲಿ ಕೇವಲ ಮೂರು ಗಂಟೆ ತ್ರಿಫೇಸ್‌ ವಿದ್ಯುತ್‌ ಇರುತ್ತದೆ. ಇದರ ಮಧ್ಯೆ ಅನಿಯಮಿತ ವಿದ್ಯುತ್‌ ಕಡಿತದಿಂದಾಗಿ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ನೀರಿಗಾಗಿ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರತಿನಿತ್ಯ ಜಗಳವಾಡುವ ಸ್ಥಿತಿ ಉಂಟಾಗಿದೆ.

ಪ್ರತಿಭಟನೆ ನಿತ್ಯ ನಿರಂತರ: ಕುಡಿಯುವ ನೀರಿನ ಹಾಹಾಕಾರದಿಂದ ಬೇಸತ್ತಿರುವ ಜನರು ಜಿಲ್ಲಾಡಳಿತ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಸಿಇಒ ಕಚೇರಿಗೆ ಮುತ್ತಿಗೆ, ರಸ್ತೆ ತಡೆ, ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ ಘೇರಾವ್‌, ಗ್ರಾಪಂಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಜಿಲ್ಲೆಯಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿತ್ಯ ಕೂಲಿ ಹೋದರಷ್ಟೇ ಬದುಕಿನ ಬಂಡಿ ಸಾಗುತ್ತದೆ. ಆದರೆ ನೀರಿಗಾಗಿ ಖಾಲಿ ಕೊಡ ಹಿಡಿದು ರೈತರ ಜಮೀನು, ಅಕ್ಕ ಪಕ್ಕದ ಊರುಗಳಿಗೆ ಅಲೆಯುವುದೇ ಕಾಯಕವಾಗಿದೆ. ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು, ಮೊಳಕಾಲ್ಮೂರು ತಾಲೂಕಿನ ಗಡಿ ಭಾಗದ ಹಳ್ಳಿಗಳ ಜನರು ಆಂಧ್ರಪ್ರದೇಶದ ರಾಯದುರ್ಗ, ಅಗ್ರಹಾರ ಮತ್ತಿತರ ಹಳ್ಳಿಗಳಿಗೆ ಹೋಗಿ ಕುಡಿಯುವ ನೀರು ತರುತ್ತಿದ್ದಾರೆ.

Advertisement

ಪರಿಹಾರೋಪಾಯ ಏನು?: ತುರ್ತಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಬೇಕು. ಹಾಲಿ ಗ್ರಾಮಗಳಲ್ಲಿ ದೊರೆಯುತ್ತಿರುವ ಖಾಸಗಿ ನೀರು ಬಳಕೆಗೆ ಮುಂದಾಗಬೇಕು. ದುರಸ್ತಿಯಲ್ಲಿರುವ ಮೋಟಾರ್‌ ಪಂಪ್‌ ಗಳ ದುರಸ್ತಿ ಮಾಡಬೇಕು. ಜಲಮೂಲ ಪತ್ತೆ ಮಾಡಿ ಕೊಳವೆಬಾವಿ ಕೊರೆದು ನೀರು ನೀಡಬೇಕು. ಶಾಶ್ವತ ಪರಿಹಾರವಾಗಿ ವಾಣಿವಿಲಾಸ ಸಾಗರ ಜಲಾಶಯ, ಶಾಂತಿಸಾಗರದಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಎಲ್ಲಾಗ್ರಾಮಗಳಿಗೆ ನೀರು ನೀಡಬೇಕು.

ಜಿಲ್ಲಾಡಳಿತ ಕೇವಲ ಜನರಿಗೆ ಅಗತ್ಯ ಇರುವಷ್ಟು ನೀರು ಪೂರೈಕೆಗೆ ಆದ್ಯತೆ ನೀಡುತ್ತಿದೆ. ಆದರೆ ಸುಮಾರು 15 ಲಕ್ಷಕ್ಕಿಂತ ಹೆಚ್ಚಿರುವ ಕುರಿ, ಮೇಕೆ, ಹಸು, ಎಮ್ಮೆ ಸೇರಿದಂತೆ ಇತರೆ ಜಾನುವಾರುಗಳಿಗೆ ಅಗತ್ಯವಿರುವಷ್ಟು ನೀರು ಒದಗಿಸುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆಯೂ ಗಮನ ಹರಿಸಿ ಜನ-ಜಾನುವಾರುಗಳ ನೀರಿನ ಬವಣೆ ತಪ್ಪಿಸಲು ಮುಂದಾಗಬೇಕಿದೆ.

ಜಲಮೂಲ ಲಭ್ಯ ಇರುವ ಕಡೆಗಳಲ್ಲಿ ಖಾಸಗಿಯವರಿಂದ ನೀರು ಪಡೆದು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಯಾವುದೇ ಜಲಮೂಲ ಲಭ್ಯವಾಗದಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸುಮಾರು 40 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಡುವ ಸಾಧ್ಯತೆ ಇದ್ದು, ಸಮರ್ಪಕ ನೀರು ಪೂರೈಕೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಿ. ಸತ್ಯಭಾಮ, ಜಿಪಂ ಸಿಇಒ.

Advertisement

Udayavani is now on Telegram. Click here to join our channel and stay updated with the latest news.

Next