Advertisement

ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುವುದೇ ಗುರಿ : ಅಥಾವುಲ್ಲಾ ಜೋಕಟ್ಟೆ

10:31 PM Apr 03, 2018 | Karthik A |

ಮಂಗಳೂರು: ಜಾತ್ಯತೀತ ನಿಲುವನ್ನು ಬೆಂಬಲಿಸುವುದು, ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುವುದೇ ಎಸ್‌ಡಿಪಿಐ ಪಕ್ಷದ ಮೂಲ ಉದ್ದೇಶವಾಗಿದ್ದು, ಹಸಿವು ಮುಕ್ತ, ಭಯಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಪಕ್ಷವು ಈ ಬಾರಿಯ ಚುನಾವಣೆಯನ್ನು ಎದುರಿಸಲಿದೆ. ದ.ಕ. ಜಿಲ್ಲೆಯ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಅಂತಿಮಗೊಂಡಿದ್ದು, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಾರದೊಳಗೆ ತೀರ್ಮಾನವಾಗಲಿದೆ ಎಂದು ಎಸ್‌.ಡಿ.ಪಿ.ಐ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅವರು ತಿಳಿಸಿದ್ದಾರೆ. ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಪಕ್ಷವು ಏಳು ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕಿಳಿಸಿದ್ದು, ಬೆಳ್ತಂಗಡಿ ಕ್ಷೇತ್ರದಲ್ಲಿ ಮಾತ್ರ ಬಿಎಸ್‌ಪಿಗೆ ಬೆಂಬಲ ನೀಡಿದ್ದೆವು. ಕಳೆದ ಚುನಾವಣೆಯಲ್ಲಿ ಪಕ್ಷವು ಜಿಲ್ಲೆಯಲ್ಲಿ ಸುಮಾರು 25,000ಕ್ಕಿಂತಲೂ ಅಧಿಕ ಮತಗಳನ್ನು ಪಡೆದಿದ್ದು, ಈ ಬಾರಿ ಇನ್ನಷ್ಟು ಹೆಚ್ಚಿನ ಮತಗಳನ್ನು ಪಡೆಯಲಿದ್ದೇವೆ.

Advertisement

ರಾಜ್ಯದಲ್ಲಿ ಒಟ್ಟು 50 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಪಕ್ಷವು ಸ್ಪರ್ಧಿಸಲಿದ್ದು, ಅದರಲ್ಲಿ ಈಗಾಗಲೇ 25 ಕ್ಷೇತ್ರಗಳ ಹೆಸರು ಅಂತಿಮಗೊಂಡಿದೆ. ಜಿಲ್ಲೆಯ ಕ್ಷೇತ್ರಗಳ ಪೈಕಿ ಬಂಟ್ವಾಳ, ಮಂಗಳೂರು ಉತ್ತರ, ಸುಳ್ಯ ಹಾಗೂ ಪುತ್ತೂರು ಕ್ಷೇತ್ರಗಳ ಹೆಸರು ಅಂತಿಮಗೊಂಡ 25 ಕ್ಷೇತ್ರಗಳ ಪಟ್ಟಿಯಲ್ಲಿದ್ದು, ಉಳಿದ ಕ್ಷೇತ್ರಗಳು ಚರ್ಚೆಯಲ್ಲಿವೆ. ಹೀಗಾಗಿ ಯಾವ ಕ್ಷೇತ್ರದಲ್ಲಿ ಎಸ್‌ಡಿಪಿಐ ಸ್ಪರ್ಧಿಸಲಿದೆ ಎಂದು ಇನ್ನಷ್ಟೇ ತೀರ್ಮಾನವಾಗಬೇಕಿದೆ.

ಆಯ್ಕೆಯಾದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ರಾಜ್ಯ ಸಮಿತಿಯೇ ಅಂತಿಮಗೊಳಿಸಲಿದೆ. ಈಗಾಗಲೇ ಜಿಲ್ಲಾ ಸಮಿತಿಯು ಕಾರ್ಯಕರ್ತರ ಜತೆ ಚರ್ಚಿಸಿ, ಅವರ ಅಭಿ ಪ್ರಾಯಗಳನ್ನು ಪಡೆದುಕೊಂಡು ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಜಿಲ್ಲಾ ಸಮಿತಿಗೆ ಕಳುಹಿಸಿಕೊಟ್ಟಿದ್ದೇವೆ. ಪ್ರಸ್ತುತ ಬಂಟ್ವಾಳ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ರಿಯಾಜ್‌ ಫರಂಗಿಪೇಟೆ ಆಯ್ಕೆಯಾಗಿದ್ದು, ಉಳಿದ ಅಭ್ಯರ್ಥಿಗಳ ಹೆಸರನ್ನು ರಾಜ್ಯ ಸಮಿತಿ ಘೋಷಣೆ ಮಾಡುತ್ತದೆ.

ನಾವು ಸ್ಪರ್ಧೆ ಮಾಡದೇ ಇರುವ ಕ್ಷೇತ್ರಗಳಲ್ಲಿ ಜಾತ್ಯತೀತ ನಿಲುವು ಇರುವ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದ್ದು, ಯಾರಿಗೆ ಬೆಂಬಲ ಕೊಡಬೇಕು ಎಂಬುದು ತೀರ್ಮಾನ ಆಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಸಾಗಲಿದ್ದು, ರಾಜ್ಯದಲ್ಲಿ ಜಾತ್ಯತೀತ ನಿಲುವಿನ ಶಕ್ತಿ ಸರಕಾರ ಮಾಡಬೇಕು ಎಂಬ ಆಶಯವನ್ನು ನಾವು ಹೊಂದಿದ್ದು ಅಂಥವರಿಗೆ ನಮ್ಮ ಬೆಂಬಲ ಇರುತ್ತದೆ.

ಒಂದು ಧರ್ಮಕ್ಕೆ ಸೀಮಿತವಾಗಿಲ್ಲ
ನಾವು ಮತ ವಿಭಜನೆ ಮಾಡುತ್ತೇವೆ ಎಂದು ಆರೋಪ ಮಾಡುವವರು ಯಾರ ಮತ ವಿಭಜನೆ ಯಾಗುತ್ತಿದೆ ಎಂಬ ನಮ್ಮ ಪ್ರಶೆಗೆ ಉತ್ತರಿಸಲಿ. ಯಾವ ಪಕ್ಷವೂ ಯಾವುದೇ ಧರ್ಮವನ್ನು ದತ್ತು ಪಡೆದು ಕೊಂಡಿಲ್ಲ. ನಾವು ಕೂಡ ಯಾರನ್ನೂ ದತ್ತು ತೆಗೆದುಕೊಂಡಿಲ್ಲ. ಆದರೆ ಕೆಲವೊಂದು ಪಕ್ಷಗಳು ಜಾತ್ಯತೀತರೆಂದು ಹೇಳಿಕೊಂಡು ಗುತ್ತಿಗೆ ಪಡೆದ ರೀತಿಯಲ್ಲಿ  ವರ್ತಿಸುತ್ತಿವೆ. ಆದರೆ ಅಂತಹ ತಂತ್ರಗಳು ಇಂದು ನಡೆಯಲಾರವು. ಎಸ್‌ಡಿಪಿಐ ಕೂಡ ಒಂದು 
ಧರ್ಮಕ್ಕೆ ಸೀಮಿತವಾದ ಪಕ್ಷವಲ್ಲ. ಇದು ಅಲ್ಪ ಸಂಖ್ಯಾಕರು, ಹಿಂದುಳಿದ  ವರ್ಗದವರು, ದಲಿತರ ಪರವಾಗಿ ಹೋರಾಟ ಮಾಡಲಿದೆ. ಎಲ್ಲ ಪಕ್ಷದವರಿಗೂ ಮತ ಕೇಳುವ ಹಕ್ಕಿದ್ದು, ಅದನ್ನೇ ನಾವು ಕೂಡ ಮಾಡುತ್ತಿದ್ದೇವೆ. ವೃಥಾರೋಪಗಳಿಗೆ ಪಕ್ಷವು ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸವನ್ನು ಮುಂದುವರಿಸಲಿದೆ.

Advertisement

ಚುನಾವಣೆಗೆ ಪೂರ್ಣ ಸಜ್ಜು
ಚುನಾವಣೆಯನ್ನೆದುರಿಸುವುದಕ್ಕೆ ಪಕ್ಷವು ಪೂರ್ಣ ರೀತಿಯಲ್ಲಿ ಸಜ್ಜಾಗಿದ್ದು, ಅದಕ್ಕಾಗಿ ರಾಜ್ಯದೆಲ್ಲೆಡೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಪ್ರತಿ ಕ್ಷೇತ್ರದಲ್ಲೂ ಕಾರ್ಯಕರ್ತರ ಸಭೆ ನಡೆಸಿದ್ದೇವೆ.ಸ್ನೇಹ ಸಮ್ಮಿಲನ, ಕುಟುಂಬ ಸಮ್ಮಿಲನದಂತಹ ಕಾರ್ಯಕ್ರಮಗಳು ಕೂಡ ಯಶಸ್ವಿಯಾಗಿ ನಡೆದಿರುತ್ತವೆ. ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಬೂತ್‌ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಹೆಚ್ಚಿನ ಕಡೆಗಳಲ್ಲಿ ಈ ಹಿಂದಿನ ಸಮಿತಿಗಳನ್ನೇ ಚುರುಕುಗೊಳಿಸುವ ಕಾರ್ಯ ಮಾಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಸಂಘಟಿತರಾಗಿ ದುಡಿಯುವ ವಿಶ್ವಾಸವನ್ನು ಹೊಂದಿದ್ದೇವೆ.

ಭಯಮುಕ್ತ, ಹಸಿವುಮುಕ್ತ ಸಮಾಜ ನಿರ್ಮಾಣದ ಗುರಿಯನ್ನು ಕಾರ್ಯಕರ್ತರು ಜನರಿಗೆ ಮನದಟ್ಟು ಮಾಡಲಿದ್ದಾರೆ. ಈ ಮೂಲಕ ಈ ಬಾರಿ ಎಸ್‌ಡಿಪಿಐ ಪಕ್ಷಕ್ಕೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತವನ್ನು ಹಾಕುವ ವಿಶ್ವಾಸವನ್ನು ಹೊಂದಿದ್ದೇವೆ. ಪ್ರಸ್ತುತ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಮಾತ್ರ ಅಂತಿಮಗೊಂಡಿದ್ದರೂ ಶೀಘ್ರದಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳು ಯಾರೆಂದು ಸ್ಪಷ್ಟ ಚಿತ್ರಣ ಲಭಿಸಿ ಪ್ರಚಾರ ಕಾರ್ಯ ಆರಂಭಗೊಳ್ಳಲಿದೆ. ನಮ್ಮ ಪಕ್ಷಕ್ಕೆ ಈಗಾಗಲೇ ಹೆಚ್ಚಿನ ಜನಬೆಂಬಲ ವ್ಯಕ್ತವಾಗಿದ್ದು, ಹೆಚ್ಚಿನ ಮತ ಪಡೆಯುವ ವಿಶ್ವಾಸವಿದೆ ಎಂದು ಅಥಾವುಲ್ಲಾ ತಿಳಿಸಿದರು.

ಜಾತ್ಯತೀತ ಶಕ್ತಿಗಳು ಒಂದಾಗಬೇಕು
ಕೋಮುವಾದಿ ಶಕ್ತಿಗಳು ಮೇಲೆ ಬಾರದಂತೆ ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಹಸಿವುಮುಕ್ತ, ಭಯಮುಕ್ತ ಬದುಕಿನ ಕನಸಿನೊಂದಿಗೆ ಜನರೆಡೆಗೆ ನಮ್ಮ ನಡಿಗೆ ಸಾಗಲಿದೆ. ಜಾತ್ಯತೀತ ನಿಲುವು ಹೊಂದಿರುವ ಕಾಂಗ್ರೆಸ್‌ ಅಲ್ಪಸಂಖ್ಯಾಕರ ಮತ ನಮಗೆ ಮಾತ್ರ ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಆದರೆ ಅವರು ಅಲ್ಪಸಂಖ್ಯಾಕರನ್ನು, ದಲಿತರನ್ನು, ಹಿಂದುಳಿದ ವರ್ಗದವರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. 70 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾಕರಿಗೆ ಯಾವುದೇ ಕೊಡುಗೆಗಳನ್ನು ನೀಡಿಲ್ಲ. ಅವರ ಸ್ವಾತಂತ್ರ್ಯ, ಸಂವಿಧಾನದ ಹಕ್ಕನ್ನೂ ನೀಡಿಲ್ಲ. ಹಕ್ಕುಗಳು, ನ್ಯಾಯವನ್ನು ಕಸಿಯುವ ಕೆಲಸವನ್ನು ಮಾಡಿದೆ. ಕೇಂದ್ರದಲ್ಲಾಗಲಿ, ರಾಜ್ಯದಲ್ಲಾಗಲಿ ಇದಕ್ಕೆ ಕಾಂಗ್ರೆಸ್‌ ಸರಕಾರವೇ ಮುಖ್ಯಕಾರಣ. ಈ ಹಿನ್ನೆಲೆಯಲ್ಲಿ ನಾವು ಕೂಡ ಸಂಘಟಿತರಾಗಿ ಒಂದು ಶಕ್ತಿಯಾಗಿ ಕೆಲಸ ಮಾಡುತ್ತಿದ್ದೇವೆ.
– ಅಥಾವುಲ್ಲಾ  ಜೋಕಟ್ಟೆ

ಅನುದಾನ ವ್ಯಯ ಮಾಡಿಲ್ಲ
ಬಿಜೆಪಿ ಕೋಮುವಾದಿ ಶಕ್ತಿಯಾಗಿ ಕೆಲಸ ಮಾಡಿದರೆ; ಕಾಂಗ್ರೆಸ್‌ ಅಲ್ಪಸಂಖ್ಯಾಕರನ್ನು ಅವಗಣಿಸುವ ಕೆಲಸ ಮಾಡುತ್ತಿದೆ. ಅವರ ಯಾವುದೇ ಬೇಡಿಕೆ ಈಡೇರಿಸಿಲ್ಲ. ಪ್ರತಿವರ್ಷ ಬಜೆಟ್‌ನಲ್ಲಿ ಅಲ್ಪಸಂಖ್ಯಾಕರಿಗಾಗಿ ಅನುದಾನ ಮೀಸಲಿಡುತ್ತಲೇ ಬಂದಿದ್ದಾರೆ. ಆದರೆ ಅದರ ಶೇ. 50 ಅನುದಾನವನ್ನೂ ವ್ಯಯ ಮಾಡಿಲ್ಲ. ಹೀಗಾಗಿ ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಸ್ಪರ್ಧೆ ಮಾಡುವ ಚಿಂತನೆ ನಡೆಸಿದ್ದೇವೆ. 

ಜಾತ್ಯತೀತ ನಿಲುವು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡುವುದು ನಮ್ಮ ಸ್ಪರ್ಧೆಯ ಮೂಲ ಉದ್ದೇಶವಾಗಿದ್ದು, ಇದನ್ನು ಜನರಿಗೆ ಮನವರಿಕೆ ಮಾಡಿ, ಎಸ್‌ಡಿಪಿಐ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಿದ್ದೇವೆ. ಹಿಂದುಳಿದ ವರ್ಗದವ ರಿಗೂ ಪ್ರಾತಿನಿಧ್ಯ ನೀಡುವುದು ನಮ್ಮ ಪಕ್ಷದ ಉದ್ದೇಶಗಳಲ್ಲೊಂದಾಗಿದೆ. ಅಲ್ಪಸಂಖ್ಯಾಕರು, ಹಿಂದುಳಿದ ವರ್ಗದವರು, ದಲಿತರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಪ್ರಾತಿನಿಧ್ಯದ ಹಕ್ಕನ್ನು ದೊರಕಿಸಿ ಕೊಡುವ ಕಾರ್ಯವನ್ನು ಎಸ್‌ಡಿಪಿಐ ಮಾಡಲಿದೆ.

— ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next