ಚಿರಂಜೀವಿ ಸರ್ಜಾ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ. ಈಗ ಅವರ ಮತ್ತೂಂದು ಹೊಸ ಚಿತ್ರ ಸೆಟ್ಟೇರಿದೆ. ಹೌದು, ಚಿರಂಜೀವಿ ಸರ್ಜಾ ಅಭಿನಯದ ಹೊಸ ಚಿತ್ರಕ್ಕೆ “ಕ್ಷತ್ರಿಯ’ ಎಂದು ಹೆಸರಿಡಲಾಗಿದ್ದು, ಬುಧವಾರ ಮಲ್ಲೇಶ್ವರಂನ ಆಂಜನೇಯ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ನಟ ಧ್ರುವ ಸರ್ಜಾ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ನಿರ್ದೇಶಕ ಸಂತೋಷ್ ಆನಂದರಾಮ್ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಸಮಾಜದ ಒಳಿತಿಗೆ ಹೋರಾಡುವ ಒಬ್ಬ ಆಧುನಿಕ “ಕ್ಷತ್ರಿಯ’ನ ಪಾತ್ರದಲ್ಲಿ ಚಿರು ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಅವರ ಪಾತ್ರಕ್ಕೆ ಎರಡು ವಿಭಿನ್ನ ಶೇಡ್‌ಗಳಿವೆಯಂತೆ. ಈ ಹಿಂದೆ ಪಿ.ವಾಸು, ದಿನಕರ್ ತೂಗುದೀಪ, ತರುಣ್ ಸುಧೀರ್, ಸಂತೋಷ್ ಆನಂದರಾಮ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವವಿರುವ ಅನಿಲ್ ಮಂಡ್ಯ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
ಚಿತ್ರದ ಬಗ್ಗೆ ಹೇಳಿಕೊಳ್ಳುವ ಚಿರಂಜೀವಿ ಸರ್ಜಾ, “ನಿರ್ದೇಶಕ ಅನಿಲ್ ಒನ್ ಲೈನ್ ಸ್ಟೋರಿ ಹೇಳುತ್ತಿದ್ದಂತೆಯೇ ಕಥೆ ಇಷ್ಟವಾಯ್ತು. ಕೂಡಲೇ ಅವರನ್ನು ಕರೆಸಿಕೊಂಡು ಪೂರ್ಣ ಕಥೆ ಕೇಳಿದೆ. ಸಿನಿಮಾದಲ್ಲಿ ನಟಿಸಲೇಬೇಕು ಎಂದು ಒಪ್ಪಿಕೊಂಡೆ. ಈ ಸಿನಿಮಾಗೆ ಎಲ್ಲರೂ ಎಲ್ಲವನ್ನೂ ತಯಾರಿ ಮಾಡಿಕೊಂಡಿದ್ದಾರೆ.
ಚಿತ್ರದ ಕಥೆ, ಪಾತ್ರ ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ. ನಿರ್ದೇಶಕ ಅನಿಲ್ ಮಂಡ್ಯ ಅವರಿಗಿದು ಮೊದಲ ಚಿತ್ರ. ಆ ಬಗ್ಗೆ ಹೇಳುವ ಅವರು, “ನಾಯಕ ನಟನನ್ನು ಕೇಂದ್ರೀಕರಿಸಿಕೊಂಡು ಬರೆದಿರುವ ಈ ಕಥೆಯ ಮೊದಲಾರ್ಧದಲ್ಲಿ ಸೆಂಟಿಮೆಂಟ್ ಅಂಶಗಳಿದ್ದರೆ, ದ್ವಿತಿಯಾರ್ಧ ಪಕ್ಕಾ ಕಮರ್ಷಿಯಲ್ ಅಂಶಗಳಿವೆ. ಇಲ್ಲಿ ಅಕ್ಕ ತಮ್ಮನ ನಡುವಿನ ಬಾಂಧವ್ಯದ ಕಥೆಯೂ ಸಾಗಲಿದೆ.
ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಘಟನೆಗಳೇ ಇಲ್ಲಿವೆ. ಚಿತ್ರದಲ್ಲಿರುವುದರಿಂದ ಪ್ರೇಕ್ಷಕರು ಕೂಡಾ ಇಲ್ಲಿನ ಪಾತ್ರಗಳೊಂದಿಗೆ ಕನೆಕ್ಟ್ ಆಗಿಬಿಡುತ್ತಾರೆ. ಮಂಡ್ಯದ ಗಂಡು ಅಂಬರೀಶ್ ಅವರ ಹುಟ್ಟುಹಬ್ಬದ ದಿನದಂದೇ ನನ್ನ ನಿರ್ದೇಶನದ ಮೊದಲ ಚಿತ್ರ ಮುಹೂರ್ತ ಚರಿಸಿಕೊಂಡಿರುವುದು ನನ್ನ ಪಾಲಿನ ಅದೃಷ್ಟ ಎಂದೇ ಭಾವಿಸಿದ್ದೇನೆ’ ಎನ್ನುತ್ತಾರೆ.
ಸುಮಾರು 55 ದಿನಗಳ ಕಾಲ ಬೆಂಗಳೂರು, ಮೈಸೂರು, ಮುಂಬೈ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಚಿಸಿದೆ. ಚಿತ್ರದಲ್ಲಿ ದೇವರಾಜ್, ಸುಧಾರಾಣಿ, ಸಾಧುಕೋಕಿಲ ಇತರರು ಅಭಿನಯಿಸುತ್ತಿದ್ದಾರೆ. ಸದ್ಯ ನಾಯಕಿಯ ಪಾತ್ರಕ್ಕಾಗಿ ಹುಡುಕಾಟ ನಡೆಯುತ್ತಿದ್ದು, ಶೀಘ್ರವೇ ನಾಯಕಿ ಅಂತಿಮವಾಗಲಿದ್ದಾರೆ’ ಎಂಬುದು ಚಿತ್ರತಂಡದ ಹೇಳಿಕೆ. ಬಹದ್ದೂರ್ ಚೇತನ್ ಸಂಭಾಷಣೆ ಇದೆ.
ಐದು ಹಾಡುಗಳಿಗೆ ಧರ್ಮವಿಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಡಾ. ವಿ ನಾಗೇಂದ್ರ ಪ್ರಸಾದ್,
ಯೋಗರಾಜ್ ಭಟ್ ಸಾಹಿತ್ಯವಿದೆ. ಚಿತ್ರಕ್ಕೆ ರವಿ.ವಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ. ಕೆ. ರವಿವರ್ಮ ಸಾಹಸ ಸಂಯೋಜಿಸುತ್ತಿದ್ದಾರೆ. ಈ ಹಿಂದೆ ಚಿರು ಅಭಿನಯಿಸಿದ್ದ “ಸಂಹಾರ’ ಚಿತ್ರವನ್ನು ನಿರ್ಮಿಸಿದ್ದ “ವೈಷ್ಣವಿ ಮನು ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ಎ. ವೆಂಕಟೇಶ್, ಕಿಶೋರ್ ಮಂಗಳವಾರಪೇಟೆ, ಎಂ. ಮನೀಶ್ ಮತ್ತು ಎಂ.ಜೆ ವಿಷ್ಣು ವರ್ಧನ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.