Advertisement

ಹುಬ್ಬಳ್ಳಿ: ಅರಣ್ಯ ಇಲಾಖೆ ನಿದ್ದೆಗೆಡಿಸಿದ ಚಿರತೆ

01:39 PM Sep 20, 2021 | Team Udayavani |

ವರದಿ: ಶಿವಶಂಕರ ಕಂಠಿ

Advertisement

ಹುಬ್ಬಳ್ಳಿ: ರಾಜನಗರದ ಕೇಂದ್ರೀಯ ವಿದ್ಯಾಲಯ ನಂ.1ರ ಬಳಿ ಶನಿವಾರ ರಾತ್ರಿ ಪ್ರತ್ಯಕ್ಷವಾಗಿದ್ದ ಚಿರತೆ ಬೆಳಗಾಗುವುದರೊಳಗೆ ಅಲ್ಲಿಂದ ಕಣ್ಮರೆಯಾಗಿದ್ದು ಅರಣ್ಯ ಇಲಾಖೆಯವರ ನಿದ್ದೆಗೆಡಿಸಿದ್ದರೆ, ಜನರಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ.

ಮೂರು ದಿನಗಳ ಹಿಂದೆ ನೃಪತುಂಗ ಬೆಟ್ಟದಲ್ಲಿ ರಾತ್ರಿ ವಾಯುವಿಹಾರ ಮಾಡುತ್ತಿದ್ದ ಓರ್ವರಿಗೆ ಕಾಣಿಸಿಕೊಂಡಿದ್ದ ಚಿರತೆಯು ನಂತರ ಎಲ್ಲಿ ಹೋಗಿತ್ತೋ ಗೊತ್ತಾಗಿರಲಿಲ್ಲ. ಆದರೆ, ಶನಿವಾರ ರಾತ್ರಿ ಕೇಂದ್ರೀಯ ವಿದ್ಯಾಲಯದ ಪ್ರಾಂಗಣದಲ್ಲಿ ಪ್ರತ್ಯಕ್ಷವಾಗಿತ್ತು. ವಿದ್ಯಾರ್ಥಿಯೊಬ್ಬ ಮೊಬೈಲ್‌ನಲ್ಲಿ ಅದು ಓಡಾಡುವ ದೃಶ್ಯ ಸೆರೆ ಹಿಡಿದಿದ್ದ. ಚಿರತೆ ಇರುವ ಬಗ್ಗೆ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಅಶೋಕನಗರ ಪೊಲೀಸರು ಅದರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಚಿರತೆ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದು, ರಾತ್ರಿಯೆಲ್ಲ ಗಂಗೂಬಾಯಿಹಾನಗ‌ಲ್‌ ಸಂಗೀತ ವಿದ್ಯಾಲಯ, ಟಿಂಬರ್‌ ಯಾರ್ಡ್‌ ಸೇರಿದಂತೆ ನೃಪತುಂಗ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಿರುಗಾಡಿದೆ ಎಂದು ಹೇಳಲಾಗುತ್ತಿದೆ.

ವಲಯ ಅರಣ್ಯಾಧಿಕಾರಿ ಶ್ರೀಧರ ಎಂ. ತೆಗ್ಗಿನಮನಿ‌ ನೇತೃತ್ವದಲ್ಲಿ ರಾತ್ರಿಯಿಂದ ಕಾರ್ಯಾಚರಣೆ ಮುಂದುವರಿಸಿದ್ದು, ಅದನ್ನು ಹೇಗಾದರೂ ಸೆರೆ ಹಿಡಿಯಬೇಕೆಂದು ಪ್ರತ್ಯೇಕ ಮೂರು ಕಡೆಗಳಲ್ಲಿ ಬೋನ್‌ ಇಟ್ಟಿದ್ದಾರೆ. ಆದರೆ ಚಿರತೆ ಮಾತ್ರ ಅವರ ಸೆರೆಗೆ ಬೀಳುತ್ತಿಲ್ಲ. ಚಿರತೆ ಕೆಲವು ಜನರ ಕಣ್ಣಿಗೆ ಬೀಳುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಣ್ಮರೆಯಾಗುತ್ತಿದೆ. ಅದರ ಜಾಡು ಹಿ‌ಡಿದು ಅರಣ್ಯ ಇಲಾಖೆಯವರು ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಅಲ್ಲಿಂದ ಅದು ಮಾಯವಾಗುತ್ತಿದೆ. ಅಲ್ಲದೆ ಅದರ ಜಾಡು ಹಿಡಿದು ಪತ್ತೆಗೆ ಮುಂದಾಗಬೇಕೆಂದರೆ ಭೂಮಿಯು ಒಣಗಿದ್ದರಿಂದ ಚಿರತೆಯ ಪಾದದ ಗುರುತುಗಳು ಸಿಗುತ್ತಿಲ್ಲ. ಅಲ್ಲದೆ ಯಾವುದೇ ನಾಯಿ, ಜನುವಾರುಗಳನ್ನು ತಿಂದು ಹಾಕಿದ ಕುರುಹು ಸಿಗುತ್ತಿಲ್ಲ. ಹೀಗಾಗಿ ಕಾರ್ಯಾಚರಣೆಗೆ ತೊಂದರೆ ಆಗುತ್ತಿದೆ ಎಂದು ತಿಳಿದು ಬಂದಿದೆ.

ಚಿರತೆ ಕಳೆದ ಮೂರು ದಿನಗಳಿಂದ ನೃತಪತುಂಗ ಬೆಟ್ಟ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿದೆ. ರಾತ್ರಿ ಹೊತ್ತು ಮಾತ್ರ ಕಾಣಿಸಿಕೊಳ್ಳುತ್ತಿರುವ ಅದು ಹಗಲು ಹೊತ್ತಿನಲ್ಲಿ ಯಾವ ಗಿಡ-ಗಂಟೆ, ಪೊದೆಯಲ್ಲಿ ಅವಿತುಕೊಂಡಿರುತ್ತದೋ ಗೊತ್ತಾಗುತ್ತಿಲ್ಲ. ಇದರ ಪತ್ತೆಗೆ ಸಿಸಿ ಕ್ಯಾಮರಾ ಹಾಗೂ‌ ಡ್ರೋನ್‌ ಸಹ ಬಳಕೆ ಮಾಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next