ನಾಯಕನಹಟ್ಟಿ: ಬೆಸ್ಕಾಂ ಸಿಬ್ಬಂದಿ ತಡವಾಗಿ ಮೀಟರ್ ಬಿಲ್ ನೀಡಿದ್ದರಿಂದ ವಿದ್ಯುತ್ ಬಿಲ್ ಜಾಸ್ತಿಯಾಗಿ ಗ್ರಾಹಕರಿಗೆ ಆಘಾತ ತಂದಿಟ್ಟ ಘಟನೆ ನಡೆದಿದೆ.
ಪ್ರತಿ ತಿಂಗಳ 5 ನೇ ತಾರೀಕಿನಂದು ಬೆಸ್ಕಾಂ ಗ್ರಾಹಕರಿಗೆ ಬಿಲ್ ನೀಡಬೇಕು. ಇದು ಒಂದೆರಡು ದಿನ ತಡವಾಗಬಹುದು. ಆದರೆ ಇಲ್ಲಿನ ಬೆಸ್ಕಾಂ ಸಿಬ್ಬಂದಿ 5ಕ್ಕೆ ಬದಲಾಗಿ ಏ. 15 ಕ್ಕೆ ಬಿಲ್ ನೀಡಿದ್ದಾರೆ. ಇದರಿಂದಾಗಿ ಹೆಚ್ಚಿನ ಬಿಲ್ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಪಟ್ಟಣದ ಬೈಪಾಸ್ ಬಡಾವಣೆ ಪ್ರದೇಶದಲ್ಲಿ ಬೆಸ್ಕಾಂ ಸಿಬ್ಬಂದಿಯ ಲೋಪ ಕಂಡು ಬಂದಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಬಿಲ್ ಬಂದಿದೆ.
ಬೆಸ್ಕಾಂ ಪ್ರತಿ ಮನೆಗೆ 30 ಯುನಿಟ್ ವಿದ್ಯುತ್ ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚು
ಯುನಿಟ್ ಬಳಕೆಯಾಗುತ್ತಿದ್ದಂತೆ ಸ್ಲಾಬ್ ದರ ಹೆಚ್ಚಾಗುತ್ತದೆ. ಹತ್ತು ದಿನ ತಡವಾಗಿ ಬಿಲ್ ನೀಡಿರುವುದರಿಂದ ಸ್ಲಾಬ್ ಮಿತಿ ಹೆಚ್ಚಾಗಿ ದುಪ್ಪಟ್ಟು ದರ ಪಾವತಿಸಬೇಕಾಗಿದೆ. ಬೆಸ್ಕಾಂ ಬಿಲ್ನಲ್ಲಿ 30 ಯುನಿಟ್ ಗರಿಷ್ಠ ಮಿತಿ ನೀಡಲಾಗುವುದು ಎಂದು ನಮೂದಿಸಲಾಗಿದೆ. ಇದಕ್ಕೆ ಪ್ರತಿ ಯುನಿಟ್‌ಗೆ 3.20 ರೂ. ದರ ನಿಗದಿಪಡಿಸಲಾಗಿದೆ. ಎಲ್ಟಿ 2 ಯೋಜನೆಯಡಿಯಲ್ಲಿನ ಗ್ರಾಹಕರು 30 ಯುನಿಟ್ಗಿಂತ ಹೆಚ್ಚು ಬಳಕೆ ಮಾಡಿಕೊಂಡರೆ 4.75 ರೂಗಳನ್ನು ಪಾವತಿಸಬೇಕು. 70 ಯುನಿಟ್ಗಿಂತ ವರೆಗೆ ಬಳಕೆ ಮಾಡಿದರೆ 6.75 ರೂ. ತೆರಬೇಕು. 70 ಯುನಿಟ್‌ಗಳಿಗಿಂತ ಹೆಚ್ಚು ಬಳಕೆ ಮಾಡಿದರೆ ಪ್ರತಿ ಯುನಿಟ್‌ಗೆ 8 ರೂ.ನಂತೆ ಬಿಲ್ ಪಾವತಿಸಬೇಕು. ಎಲ್ಲ ಗ್ರಾಹಕರು ಮಾರ್ಗದ ಶುಲ್ಕವಾಗಿ 50 ರೂ.ಗಳನ್ನು ನೀಡಬೇಕು. ತಿಂಗಳ 5 ನೇ ತಾರೀಕಿನ ನಂತರ ಬಿಲ್ ನೀಡಿರುವುದರಿಂದ ಬಳಕೆಯಾದ ವಿದ್ಯುತ್ ಬಿಲ್ ಜತೆಗೆ ಸ್ಲಾಬ್ ದರ ಸೇರಿ ಒಟ್ಟಾರೆ ಬಿಲ್ನಲ್ಲಿ ಹೆಚ್ಚಳ ಕಂಡು ಬಂದಿದೆ.
ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಮನೆಗಳಲ್ಲಿ ಫ್ಯಾನ್ ಬಳಕೆ ಹೆಚ್ಚಾಗಿದೆ. ಮನೆಯಲ್ಲಿ ರೆಫ್ರಿಜರೇಟರ್ ಹಾಗೂ ನೀರೆತ್ತುವ ಪಂಪ್ ಬಳಕೆಯೂ ಹೆಚ್ಚಾಗುತ್ತಿದೆ. ಇವುಗಳ ಜತೆಗೆ ಬೆಸ್ಕಾಂ ಸಿಬ್ಬಂದಿ ಲೋಪದಿಂದಾಗಿ ಬಿಲ್ ಪ್ರಮಾಣ ದ್ವಿಗುಣಗೊಂಡಿದೆ. ಯುಗಾದಿ, ಚುನಾವಣೆ, ಸ್ವಂತ ರಜೆಗಳಿಂದಾಗಿ ಸಿಬ್ಬಂದಿ ಬಿಲ್ ನೀಡುವುದನ್ನು ವಿಳಂಬ ಮಾಡಿದ್ದಾರೆ. ಬೆಸ್ಕಾಂ ಸಿಬ್ಬಂದಿ ತಪ್ಪಿಗೆ ಗ್ರಾಹಕರು ಹೆಚ್ಚಿನ ಬಿಲ್ ಪಾವತಿಸಬೇಕಾಗಿದೆ.
ಸಿಬ್ಬಂದಿ ಲೋಪಕ್ಕೆ ದಂಡ ಹಾಕೋರ್ಯಾರು?
ಕಳೆದ ತಿಂಗಳು 370 ರೂ. ಬಿಲ್ ಪಾವತಿಸಲಾಗಿದೆ. ಈ ಬಾರಿ 720 ರೂ. ಬಿಲ್ ಬಂದಿದೆ. ನಾವು ಬಿಲ್ ನೀಡುವುದನ್ನು ತಡ ಮಾಡಿದರೆ ಬೆಸ್ಕಾಂ ಬಡ್ಡಿ ಹಾಕುತ್ತದೆ. ಆದರೆ ಬೆಸ್ಕಾಂ ಸಿಬ್ಬಂದಿಯ ತಪ್ಪಿನಿಂದ ನಮಗೆ ಹೆಚ್ಚು ಬಿಲ್ ಬಂದಿದೆ. ಆದ್ದರಿಂದ ಮುಂದಿನ ಬಿಲ್ ನೀಡುವ ಸಮಯದಲ್ಲಿ ನಷ್ಟವನ್ನು ಸರಿದೂಗಿಸಬೇಕು. ಇಲ್ಲವಾದರೆ ಬೆಸ್ಕಾಂ ಸಿಬ್ಬಂದಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಗ್ರಾಹಕ ಪಿ.ಬಿ. ಬೋರಣ್ಣ ಎಚ್ಚರಿಸಿದರು.
ಪ್ರತಿ ತಿಂಗಳು ನಿಗದಿಪಡಿಸಿದ ದಿನಾಂಕದಂದು ಮೀಟರ್ ರೀಡಿಂಗ್ ಗುರುತಿಸಿ ಬಿಲ್ ಪಾವತಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗುವುದು. ಇದನ್ನು ಸರಿಪಡಿಸುವಂತೆ ಬೆಸ್ಕಾಂ ಸೆಕ್ಷನ್ ಇಂಜಿನಿಯರ್ ಹಾಗೂ ಸಂಬಂಧಿಸಿದ ಮೀಟರ್ ರೀಡರ್‌ಗೆ ಸೂಚನೆ ನೀಡಲಾಗಿದೆ.
•ಮಮತಾ, ಬೆಸ್ಕಾಂ ಎಇಇ, ತಳಕು.