Advertisement

ಆರ್ಯವೈಶ್ಯ ಸಂಘದ ಕಾರ್ಯ ಸ್ತುತ್ಯರ್ಹ: ಡಿವೈಎಸ್ಪಿ ಶ್ರೀಧರ್‌

09:43 PM Jun 21, 2021 | Team Udayavani |

ಚಳ್ಳಕೆರೆ: ಕೊರೊನಾ ಸಂಕಷ್ಟದಲ್ಲಿ ಬಹುತೇಕ ಎಲ್ಲಾ ಸಮುದಾಯಗಳ ಜನರು ಆರ್ಥಿಕವಾಗಿ ತೊಂದರೆಗೀಡಾಗಿದ್ದಾರೆ. ಇದಕ್ಕೆ ಆರ್ಯವೈಶ್ಯರು ಕೂಡ ಹೊರತಾಗಿಲ್ಲ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಆರ್ಯವೈಶ್ಯ ಸಂಘದ ಎಲ್ಲಾ ಘಟಕಗಳು ಸೇರಿ ಉಚಿತ ಆಹಾರ ಕಿಟ್‌ ನೀಡುತ್ತಿರುವುದು ಸ್ತುತ್ಯರ್ಹ ಎಂದು ಉಪವಿಭಾಗದ ಡಿವೈಎಸ್ಪಿ ಕೆ.ವಿ. ಶ್ರೀಧರ್‌ ಹೇಳಿದರು.

Advertisement

ಇಲ್ಲಿನ ವಾಸವಿ ಮಹಲ್‌ ನಲ್ಲಿ ಭಾನುವಾರ ಆರ್ಯವೈಶ್ಯ ಸಮುದಾಯದ ಬಡ ಕುಟುಂಬಗಳಿಗೆ ಉಚಿತ ಆಹಾರ ಕಿಟ್‌ ವಿತರಿಸಿ ಅವರು ಮಾತನಾಡಿದರು. ಇದು ಎಲ್ಲರಿಗೂ ಒಂದು ರೀತಿ ಪರೀಕ್ಷೆಯ ಕಾಲ. ದುಡಿಮೆ ಮಾಡಲು ಅವಕಾಶವಿಲ್ಲ. ಎಲ್ಲಿ ಹೋದರೂ ನಮ್ಮ ಬೆನ್ನ ಹಿಂದೆಯೆ ಕೊರೊನಾ ವೈರಾಣು ಬಾಧಿಸುತ್ತಿದೆ. ಇಂತಹ ದುರ್ಗಮ ಸ್ಥಿತಿಯಲ್ಲಿ ಸಮುದಾಯದ ಬಡ ಜನತೆಗೆ ನೆರವು ಕಲ್ಪಿಸಿ ಸಮುದಾಯದ ಸ್ವಾಮೀಜಿಯವರ ಎರಡನೇ ವರ್ಷದ ಪಟ್ಟಾಭಿಷೇಕವನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣ ಎಂದರು.

ಠಾಣಾ ಇನ್ಸ್‌ಪೆಕ್ಟರ್‌ ಜೆ.ಎಸ್‌. ತಿಪ್ಪೇಸ್ವಾಮಿ ಮಾತನಾಡಿ, ದಾನ ಮಾಡುವುದು ಶ್ರೇಷ್ಠ ಹಾಗೂ ಪುಣ್ಯದ ಕೆಲಸ. ಅದರಲ್ಲೂ ಸದಾ ಕಾಲ ಶ್ರಮ ವಹಿಸಿ ದುಡಿಯುವ ಆರ್ಯವೈಶ್ಯ ಸಮಾಜದ ಬಡವರಿಗೆ ಎಲ್ಲಾ ಸಮುದಾಯಗಳು ಸೇರಿ ನೆರವು ನೀಡುತ್ತಿರುವುದು ಮಾದರಿ ಕಾರ್ಯ ಎಂದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ರಾಮಮೋಹನ್‌ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಚಿದಾನಂದ ಗುಪ್ತ, ಉಪಾಧ್ಯಕ್ಷ ಪುರುಷೋತ್ತಮ, ಜಿಲ್ಲಾ ಉಪಾಧ್ಯಕ್ಷ ಸಿ.ಎಸ್‌. ಪ್ರಸಾದ್‌, ಸಿ. ಶ್ರೀನಿವಾಸಲು, ವೆಂಕಟ ನಾಗರಾಜು, ಸಿ.ಬಿ.ಆದಿಭಾಸ್ಕರ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next