ಕಲಬುರಗಿ: ಸೂರ್ಯನಗರಿಯ ಬೀದಿಗಳು, ಕವಿಯ ರಾಜಮಾರ್ಗವಾಗಿ, ಅರಿಶಿನ- ಕೆಂಪು ಬಣ್ಣಗಳಿಂದ ಮೈದಳೆದಿತ್ತು. ಪುಷ್ಪಾಲಂಕೃತ ಕನ್ನಡ ಸಾರೋಟ್‌ನಲ್ಲಿ ಕುಳಿತ ಸಮ್ಮೇಳನಾಧ್ಯಕ್ಷ ಎಚ್ಚೆಸ್ವಿ, ಚಿನ್ನಾರಿಮುತ್ತನಂತೆ ನಸುನಗುತ್ತಾ, ಗುಂಬಜ್‌ಗಳ ಬೀದಿಯಲ್ಲಿ, ಸೂಫಿಸಂತರು ನಡೆದಾಡಿದ ರಸ್ತೆಯಲ್ಲಿ ಸಾಗಿ, ಕನ್ನಡಿಗರತ್ತ ಕೈಬೀಸುತ್ತಿದ್ದರು.
ಇದು 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ವೈಭವೋಪೇತ ಮೆರವಣಿಗೆಯ ದೃಶ್ಯ. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವೇಷ ಧರಿಸಿದ, ಪುಟ್ಟ ಪುಟ್ಟ ಮಕ್ಕಳು ಕುಣಿಯುತ್ತಾ, ಡೋಲು- ಕೊಂಬು- ನಗಾರಿಗಳ ಸದ್ದಿಗೆ ಶ್ರುತಿಯಾಗಿದ್ದರು. “ಕನ್ನಡವೇ ಸತ್ಯ, ಕನ್ನಡವೇ ನಿತ್ಯ’, “ಬಾರಿಸು ಕನ್ನಡ ಡಿಂಡಿಮವಾ…’ ಹಾಡುಗಳು, ಕನ್ನಡಪರ ಘೋಷಣೆಗಳು ಕಲಬುರಗಿಯ ಬೀದಿಗಳಲ್ಲಿ ಮೊಳಗಿದವು.
ಮಹಾನ್ ಕಲಾವಿದ ಎಸ್.ಎಂ.ಪಂಡಿತ ಅವರ ನೆನಪಿನ ರಂಗಮಂದಿರದ ಮುಂದೆ, ಸರ್ವಾಧ್ಯಕ್ಷರ ಮೆರವಣಿಗೆಗೆ ವಿದ್ಯುಕ್ತ ಚಾಲನೆ ದೊರಕಿತು. ಸೇಡಂ ರಸ್ತೆ ಮಾರ್ಗವಾಗಿ ಖರ್ಗೆ ವೃತ್ತ, ಹಳೇ ಆರ್‌ಟಿಒ ಕಚೇರಿ ಮೂಲಕ ಸಮ್ಮೇಳನ ಸ್ಥಳದ ಕಲಬುರಗಿ ವಿವಿಯವರೆಗೆ 6 ಕಿ.ಮೀ. ದೂರ ಮೆರವಣಿಗೆ ಸಾಗಿತ್ತು. 5 ವರ್ಷದ ಮಕ್ಕಳಿಂದ, ಕೋಲು ಹಿಡಿದು ನಡೆದಾಡುವ ಅಜ್ಜಂದಿರವರೆಗೆ, ಅಲ್ಲಿ ಕನ್ನಡದ ಹೆಜ್ಜೆಗಳು ಚಾರಿತ್ರಿಕ ಮೆರವಣಿಗೆಗೆ ಸಾಕ್ಷಿಯಾದವು.
ಡೊಳ್ಳು ಕುಣಿತ, ಕರಡಿ ಮಜಲು, ಲಂಬಾಣಿ ಕುಣಿತ, ದೊಡ್ಡಾಟ, ಹಲಗೆ ವಾದನ, ಸೋಮನ ಕುಣಿತ, ಗೊರವರ ಕುಣಿತ, ಪೋತರಾಜ, ಮೋಜಿನ ಕುಣಿತ, ಕೀಲು ಕುಣಿತ ಕಲಾವಿದರು ಪೈಪೋಟಿಗೆ ಬಿದ್ದವರಂತೆ ನರ್ತಿಸುತ್ತಿದ್ದರು. ನಗಾರಿ, ವೀರಗಾಸೆ, ಬೀಸು ಕಂಸಾಳೆ ಧ್ವನಿ ನಭಕ್ಕೆ ಚಿಮ್ಮಿದರೆ, ಖಾಸಾ ಬೇಡರ ಪಡೆಯವರ ಮೊಗದಲ್ಲಿ ವೀರಾವೇಷದ ಭಾವ ಕನ್ನಡಭಕ್ತಿಯನ್ನು ಪ್ರಕಟಿಸುತ್ತಿತ್ತು. ನಂದಿ ಕೋಲು, ಹೆಜ್ಜೆ ಮೇಳ, ಚಿಟ್ಟಿ ಮೇಳ, ಭಜನೆ, ಅಲೆಮಾರಿ ತಂಡಗಳೂ ಜತೆಗೆ ಹೆಜ್ಜೆ ಹಾಕಿದವು.
ಕಲಬುರಗಿ ಜಿಲ್ಲೆಯ 20ಕ್ಕೂ ಹೆಚ್ಚು ಕಲಾತಂಡಗಳೊಂದಿಗೆ ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಕೊಪ್ಪಳ, ಮಂಡ್ಯ ಉಡುಪಿ, ಧಾರವಾಡ ಸೇರಿದಂತೆ ಹಲವು ಭಾಗದಿಂದ ಬಂದ 60ಕ್ಕೂ ಅಧಿಕ ಕಲಾತಂಡಗಳು, ಮೆರವಣಿಗೆಯ ಪ್ರವಾಹದಲ್ಲಿ ಒಂದಾಗಿದ್ದವು. 85ನೇ ಸಮ್ಮೇಳನದ ಪ್ರತೀಕವಾಗಿ, 85 ಅಡಿ ಉದ್ದದ ನಾಡಧ್ವಜ, ಕನ್ನಡಪ್ರಿಯರ ಕಣ್ಮನವನ್ನು ಸೆಳೆಯಿತು.
* ರಂಗಪ್ಪ ಗಧಾರ