Advertisement

ಚಿಣ್ಣರ ಯಕ್ಷ ಧಿಂ –ಕಿಟ 

06:00 AM May 25, 2018 | |

ಬೇಸಿಗೆ ರಜೆಯಲ್ಲಿ ಆಯೋಜನೆಯಾಗುತ್ತಿರುವ ಯಕ್ಷಗಾನ ಶಿಬಿರಗಳು ವಿದ್ಯಾರ್ಥಿಗಳನ್ನು ಹೆಚ್ಚು-ಹೆಚ್ಚು ಆಕರ್ಷಿಸುತ್ತಿವೆ. ಶಿಬಿರದ ಮೂಲಕ ನೂರಾರು ವಿದ್ಯಾರ್ಥಿಗಳು ಹೆಜ್ಜೆ ಕಲಿತು ಗೆಜ್ಜೆಕಟ್ಟಿ ರಂಗಪ್ರವೇಶಿಸುತ್ತಿದ್ದಾರೆ.

Advertisement

ಯಕ್ಷಗಾನ ಕಲೆಗೆ ಸಾಕಷ್ಟು ಪ್ರೋತ್ಸಾಹ ನೀಡುವ ಕೋಟದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಇಲ್ಲಿನ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಆಶ್ರಯದಲ್ಲಿ ಸಾಲಿಗ್ರಾಮದಲ್ಲಿರುವ ಯಕ್ಷಗಾನ ಕೇಂದ್ರದ ಸದಾನಂದ ರಂಗಮಂಟಪದಲ್ಲಿ 15ದಿನಗಳ ಕಾಲ “ನಲಿಕುಣಿ’ ಎನ್ನುವ ಯಕ್ಷಗಾನ ತರಬೇತಿ ಶಿಬಿರ ನಡೆಯಿತು ಹಾಗೂ ಹಂದೆ ಶ್ರೀ ಮಹಾಗಣಪತಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಯಕ್ಷಾಂಗಣ ಟ್ರಸ್ಟ್‌ ವತಿಯಿಂದ ಯಕ್ಷಗಾನ ತರಬೇತಿ ಶಿಬಿರ ನಡೆಯಿತು. ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಯಕ್ಷಗಾನದ ಹೆಜ್ಜೆ, ಭಾಗವತಿಕೆಯನ್ನು ಕಲಿತರು. ಬೆಂಗಳೂರು, ಮೈಸೂರು, ಮುಂಬೈ ಮುಂತಾದ ಕಡೆಗಳಿಂದ ಮಕ್ಕಳು ತಮ್ಮ ಸಂಬಂಧಿಗಳ ಮನೆಗೆ ಆಗಮಿಸಿ ತರಬೇತಿಗೆ ಹಾಜರಾಗಿದ್ದು ವಿಶೇಷವಾಗಿತ್ತು. 

ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ಯಕ್ಷಗಾನ ಕ್ಷೇತ್ರಕ್ಕೆ ಹಲವಾರು ಮಂದಿ ಮೇರು ಕಲಾವಿದರನ್ನು ನೀಡಿದ ಕೀರ್ತಿಗೆ ಪಾತ್ರವಾಗಿದೆ. ಹೀಗಾಗಿ ಇಲ್ಲಿ ಸಾಂಪ್ರದಾಯಿಕ ಶೈಲಿಯಲ್ಲೇ ತರಬೇತಿಯನ್ನು ನೀಡಲಾಗುತ್ತದೆ. ಯಕ್ಷಾಂಗಣ ಟ್ರಸ್ಟ್‌ ಕೂಡ ಹಳೆಯ ತಟ್ಟು-ಮಟ್ಟುಗಳಿಗನ್ವಯ ತರಬೇತಿ ನೀಡಿತು. ರಾಜ್ಯ ಯಕ್ಷಗಾನ ಅಕಾಡಮಿಯ ಸದಸ್ಯ ರಾಜಶೇಖರ್‌ ಹೆಬ್ಟಾರ್‌ ಅವರ ಸಂಯೋಜನೆಯಲ್ಲಿ, ಗುರುಗಳಾದ ಹಿರಿಯ ಯಕ್ಷಗಾನ ತಜ್ಞ ಸದಾನಂದ ಐತಾಳ ಹಾಗೂ ಮುಂಡಾಡಿ ಬಸವ ಮರಕಾಲ, ನರಸಿಂಹ ತುಂಗ, ಕೇಶವ ಆಚಾರ್‌ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಯಕ್ಷಗಾನ ಟ್ರಸ್ಟ್‌ನಲ್ಲಿ ಸುದರ್ಶನ ಉರಾಳರ ನಿರ್ದೇಶನದಲ್ಲಿ, ಸಂಪನ್ಮೂಲ ವ್ಯಕ್ತಿಗಳಾದ ಕೆ.ಪಿ. ಹೆಗ್ಡೆ, ಸುಜಯಿಂದ್ರ ಹಂದೆ, ನರಸಿಂಹ ತುಂಗ ಕೋಟ, ಮಾಧವ ಮಣೂರು ತರಬೇತಿ ನೀಡಿದರು. ಶಿಬಿರದಲ್ಲಿ ಹೆಜ್ಜೆ, ಅಭಿನಯ, ಮಾತುಗಾರಿಕೆ ಮುಂತಾದವುಗಳನ್ನು ಕಲಿತ ಮಕ್ಕಳು ಕೊನೆಯ ದಿನ ನಡೆದ ಪ್ರಾತ್ಯಕ್ಷಿಕೆಯಲ್ಲಿ ತಾವು ಕಲಿತದನ್ನು ಪ್ರದರ್ಶನಗೊಳಿಸಿದರು. 

ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನದ ಕಡೆಗೆ ಹೆಣ್ಣು ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗಿರುವುದು ಈ ಶಿಬಿರಗಳಲ್ಲಿ ಕಂಡು ಬಂತು. ಕೆಲವು ಕಡೆಗಳಲ್ಲಿ ಶೇಕಡಾ ಐವತ್ತರಷ್ಟು ಹುಡುಗಿಯರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ಹೆತ್ತವರು ಕೂಡ ತಮ್ಮ ಮಕ್ಕಳನ್ನು ಯಕ್ಷಗಾನದ ಕಡೆಗೆ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. 

ಅದೇ ರೀತಿ ಕೋಟ ಪರಿಸರದ ಯಕ್ಷಾಂತರಂಗ ಯಕ್ಷತಂಡ, ಅಶ್ವಿ‌ನಿ ಮಧ್ಯಸ್ಥ ಸ್ಮಾರಕ ಶೈಕ್ಷಣಿಕ, ಸಾಂಸ್ಕೃತಿಕ ಕೇಂದ್ರ ಮಣೂರು, ಅಘೋರೇಶ್ವರ ಕಲಾರಂಗ, ವಡ್ಡರ್ಸೆ ಮಹಾಲಿಂಗೇಶ್ವರ ಕಲಾರಂಗ ಮುಂತಾದ ಸಂಘಟನೆಗಳು ಯಕ್ಷಗಾನದ ತರಬೇತಿ ನೀಡುವಲ್ಲಿ ಶ್ರಮಿಸುತ್ತಿದೆ. 

Advertisement

ಈ ಶಿಬಿರಗಳಲ್ಲಿ ಕಲಿತ ವಿದ್ಯಾರ್ಥಿಗಳು ಓರ್ವ ಸಮರ್ಥ ಕಲಾವಿದರಾಗಿ ಹೊರಹೊಮ್ಮದಿದ್ದರು ಉತ್ತಮ ಪ್ರೇಕ್ಷಕನಾಗಿ ಯಕ್ಷಗಾನದ ಒಳಿತು-ಕೆಡುಕುಗಳನ್ನು ವಿಮರ್ಶಿಸುವಲ್ಲಿ ಸಫಲನಾಗುತ್ತಾನೆ. ಎನ್ನುವುದು ಯಕ್ಷ ವಿಮರ್ಶಕರ ಅಭಿಪ್ರಾಯವಾಗಿದೆ.

ರಾಜೇಶ್‌ ಗಾಣಿಗ 

Advertisement

Udayavani is now on Telegram. Click here to join our channel and stay updated with the latest news.

Next