Advertisement

ಚಿಣ್ಣರ ಬಿಂಬ ಪೇಜಾವರ ವಲಯ: ಚಿಣ್ಣರ ಉತ್ಸವ ಉದ್ಘಾಟನೆ

04:16 PM Nov 08, 2017 | Team Udayavani |

ಮುಂಬಯಿ: ನನಗಿಂದು ಪೇಜಾವರ ಶ್ರೀಗಳು 15 ವರ್ಷದ ಹಿಂದೆ ಆಡಿದ ಮಾತು ನೆನಪಾಗುತ್ತದೆ.  ಚಿಣ್ಣರ ಬಿಂಬದಲ್ಲಿ ನಾವು ನಮ್ಮ ಪ್ರತಿಬಿಂಬವನ್ನು ಕಾಣಬೇಕು ಎಂದು ಅವರು ಚಿಣ್ಣರ ಬಿಂಬವನ್ನು ಉದ್ಘಾಟಿಸಿ ಶುಭಾರಂಭವನ್ನು ಮಾಡುವಾಗ ತಿಳಿಸಿದ್ದರು. ಇಂದು ಆ ಮಾತು ನಿಜವಾಗಿದೆ. ಶ್ರೀಕೃಷ್ಣನಿಗೆ ಹೇಗೆ ಇಬ್ಬರು ಮಾತೆಯರೋ ಹಾಗೇ ನಮಗೂ ತುಳು ಹಾಗೂ ಕನ್ನಡ ಎಂಬ ಇಬ್ಬರು ತಾಯಂದಿರು. ಆ ಭಾಗ್ಯ ನಮಗೆ ಲಭಿಸಿದೆ. ಈ ಎರಡೂ ಭಾಷೆಗಳು ಚಿಣ್ಣರ ಬಿಂಬದ ಮಕ್ಕಳ ಮೂಲಕ ಉಳಿಯುತ್ತವೆ ಎಂಬ ಭರವಸೆ ನನಗಿದೆ ಎಂದು ಪೇಜಾವರ ಮಠ ಸಾಂತಾಕ್ರೂಜ್‌ನ ಶ್ರೀ ರಾಮದಾಸ ಉಪಾಧ್ಯಾಯ ಅವರು ನುಡಿದರು.

Advertisement

content-img

ನ. 5ರಂದು ಸಾಂತಾಕ್ರೂಜ್‌ ಪೂರ್ವದ ಪ್ರಭಾತ್‌ ಕಾಲನಿಯ  ಪೇಜಾವರ ಮಠದ ಸಭಾಗೃಹದಲ್ಲಿ ನೆರವೇರಿದ ಚಿಣ್ಣರ ಬಿಂಬ ಪೇಜಾವರ ವಲಯ ಗೋರೆಗಾಂವ್‌, ಮಲಾಡ್‌ ಕಾಂದಿವಲಿ ಶಾಖೆಗಳ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಚಿಣ್ಣರ ಉತ್ಸವ – ಪ್ರತಿಭಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕಾಶ್‌ ಭಂಡಾರಿ ಅವರ ನೇತೃತ್ವದ ಚಿಣ್ಣರ ಬಿಂಬವು ಇನ್ನಷ್ಟು ಪ್ರಜ್ವಲಿಸಲಿ. ಅವರ ಈ ಸೇವೆಗೆ ಎಲ್ಲರ ಪ್ರೋತ್ಸಾಹ, ಸಹಕಾರ ಲಭಿಸಲಿ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಾಲಿಗ್ರಾಮ ಡಿವೈನ್‌ಪಾರ್ಕ್‌ ಟ್ರಸ್ಟ್‌ ಇದರ ಸಂಸ್ಥಾಪಕ ಡಾ| ಸತೀಶ್‌ ಕುಮಾರ್‌ ಕಾಮತ್‌ ಅವರು ಮಾತನಾಡಿ,  ಮನುಷ್ಯನಿಗೆ ಸಾಮಾಜಿಕ, ಆಧ್ಯಾತ್ಮಿಕ, ದೈವಿಕ ಆರೋಗ್ಯ ಅಗತ್ಯ. ಇದು ಎಲ್ಲವೂ ಸಿಗುವುದಾದರೆ ಕೇವಲ ಚಿಣ್ಣರ ಬಿಂಬದಲ್ಲಿ ಮಾತ್ರ ಸಾಧ್ಯ. ಇಲ್ಲಿನ ಪ್ರತಿ ಮಗುವಿಗೂ ತನ್ನ ಪ್ರತಿಭೆಯನ್ನು ತೋರಿಸುವ ಅವಕಾಶ ದೊರೆಯುತ್ತಿರುವುದು ಎಲ್ಲಕ್ಕಿಂತ ದೊಡ್ಡ ವಿಷಯ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಸಾಂತಾಕ್ರೂಜ್‌ ಕನ್ನಡ ಸಂಘದ ಅಧ್ಯಕ್ಷ ಎ. ವಿ. ಅಮೀನ್‌ ಅವರು 15 ವರ್ಷಗಳ  ಹಿಂದೆ ಒಂದು ಸಂಸ್ಥೆ ಹುಟ್ಟಿಕೊಂಡಿತು. ಅದು ಇಂದು ಹೆಮ್ಮರವಾಗಿದೆ. ಇಂದು ಮುಂಬಯಿಯಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿರುವ ಸಂಸ್ಥೆ ಅಂದರೆ ಅದು ಚಿಣ್ಣರ ಬಿಂಬ. ಇಲ್ಲಿನ ಮಕ್ಕಳಿಗೆ ಕೂಡು ಕುಟುಂಬದ ಮಹತ್ವದ ಅರಿವಾಗುತ್ತದೆ. ಮಕ್ಕಳನ್ನು ಪ್ರೀತಿಸುವುದರ ಜತೆಯಲ್ಲಿ ಅವರನ್ನು ಬೆಳೆಸೋಣ. ಮಕ್ಕಳಿಗೆ ಸಂಪತ್ತು ಮಾಡಿಡುವುದು ಬೇಡ. ಮಕ್ಕಳನ್ನೇ ಸಂಪತ್ತನ್ನಾಗಿಸೋಣ. ಆ ಸಂಪತ್ತು ಚಿಣ್ಣರ ಬಿಂಬದ ಮಕ್ಕಳು ಎಂದು ನುಡಿದು ಶುಭಹಾರೈಸಿದರು.

Advertisement

ಆಹಾರ್‌ನ ಮಾಜಿ ಅಧ್ಯಕ್ಷ, ಉದ್ಯಮಿ ನಾರಾಯಣ ಆಳ್ವ ಅವರು ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿ, ಮಕ್ಕಳಲ್ಲಿ ಸಭಾ ಕಂಪನವನ್ನು ತೊಲಗಿಸುವುದು ಅಗತ್ಯ. ಇಂತಹ ವೇದಿಕೆ ಮಕ್ಕಳಲ್ಲಿ ಧೈರ್ಯವನ್ನು ಮೂಡಿಸುತ್ತದೆ. ಇದರ ಹಿಂದೆ ಪ್ರಕಾಶ್‌ ಭಂಡಾರಿಯವರ ಯೋಗದಾನವನ್ನು ಮರೆಯುವಂತಿಲ್ಲ  ಎಂದರು.

ಅತಿಥಿಯಾಗಿ ಆಗಮಿಸಿದ ಕೌಂಟರ್‌ ಫಾರ್ಗಿಂಗ್ಸ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಆಡಳಿತ ನಿರ್ದೇಶಕ ಕೆ. ವಿ. ರಾವ್‌ ಅವರು ಜೀವನದಲ್ಲಿ ಯಶಸ್ಸು ಗಳಿಸಲು ರಾತ್ರಿ ಬೇಗ ಮಲಗಬೇಕು. ಬೆಳಗ್ಗೆ ಬೇಗ ಎದ್ದು ಹನುಮಾನ್‌ ಚಾಲೀಸ್‌ ಓದಿ ದಿನಚರಿ ಆರಂಭಿಸಬೇಕು. ಜೀವನದಲ್ಲಿ ಸಾಧಿಸುವ ಛಲವಿರಬೇಕು. ಯಾವುದೂ ಅಸಾಧ್ಯ ಎನ್ನುವುದು ಬರಲೇಬಾರದು. ಜೀವನದಲ್ಲಿ ಪ್ರತಿಯೊಂದು ಕ್ಷಣವು ಅಮೂಲ್ಯ ಎಂಬುದನ್ನು ಅರಿತುಕೊಂಡು ಬಾಳಬೇಕು ಎಂದರು.

ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಹೊಟೇಲ್‌ ಅವೆನ್ಯೂ ಇದರ ರಘುರಾಮ ಶೆಟ್ಟಿ ಅವರು ಪ್ರೀತಿಯ ಚಿಣ್ಣರಿಗೆ ಶುಭ ಹಾರೈಸಿದರು. ಕುಮಾರಿ ಸಮೀûಾ ವಿಜಯ ಕೋಟ್ಯಾನ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ  ಸುಚಿತ್ರಾ ಶೆಟ್ಟಿ, ಉಷಾ ದೇವಾಡಿಗ, ಉಷಾ ಗೌಡ, ರುಕ್ಮಿಣಿ ಗೌಡ, ಚೇತನಾ ಶೆಟ್ಟಿ, ವೀಣಾ  ಶೆಟ್ಟಿ, ಶುಭಾ ಸುವರ್ಣ, ಇಂದಿರಾ ಮೊಲಿ, ಸರಳಾ ರಾವ್‌, ಜಗದೀಶ್‌ ರಾವ್‌ ಉಪಸ್ಥಿತರಿದ್ದರು. 

ಕುಮಾರಿ ಪವಿತ್ರಾ ದೇವಾಡಿಗ ಹಾಗೂ ಲಾವಣ್ಯಾ ಶೆಟ್ಟಿಗಾರ್‌ ಅವರು ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರಾ ದೇವಾಡಿಗ ವಂದಿಸಿದರು.

ಆನಂತರ ಮೂರು ವಲಯಗಳಮಕ್ಕಳಿಗೆ ಭಜನೆ, ಭಾಷಣ, ಭಾವಗೀತೆ, ಛದ್ಮವೇಷ, ಏಕಪಾತ್ರಾಭಿನಯ, ಜಾನಪದ ನೃತ್ಯ ಸ್ಪರ್ಧೆ ಹಾಗೂ ಪಾಲಕರಿಗೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪೇಜಾವರ ವಲಯಕ್ಕೆ ಸಂಬಂಧಿಸಿದ  ಗೋರೆಗಾಂವ್‌, ಮಲಾಡ್‌ ಕಾಂದಿವಲಿ ಶಾಖೆಗಳ ನೂರಾರು ಚಿಣ್ಣರು ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾದರು. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಕರ್ನಾಟಕ ಸರಕಾರ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಚಿಣ್ಣರು, ಪಾಲಕರು, ವಿವಿಧ ಶಾಖೆಗಳ ಪದಾಧಿಕಾರಿಗಳು ಶಿಕ್ಷಕರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.