ಎಪ್ರಿಲ್, ಮೇ ತಿಂಗಳು ಬರುತ್ತಿದ್ದಂತೆ ಹೆತ್ತವರು ಮಕ್ಕಳನ್ನು ಎಲ್ಲಾದರೂ ಸಾಗ ಹಾಕುವ ಸನ್ನಾಹದಲ್ಲಿರುತ್ತಾರೆ.ಈಗ ಕೂಡು ಕುಟುಂಬಗಳು ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಮೊದಲು ಕಣ್ಣಿಗೆ ಬೀಳುವುದು ಸಮ್ಮರ್ ಕ್ಯಾಂಪ್ಸ್. ತಂದೆ – ತಾಯಿ ಇಬ್ಬರೂ ಉದ್ಯೋಗದಲ್ಲಿರುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜನಪ್ರಿಯಗೊಂಡ ಈ ಶಿಬಿರಗಳು ಇಂದು ಹೆಜ್ಜೆ ಹೆಜ್ಜೆಗೂ ಹುಟ್ಟಿಕೊಂಡಿವೆ.
ಬೇಸಗೆ ಶಿಬಿರಗಳ ಮುಖ್ಯ ಉದ್ದೇಶ ಮಕ್ಕಳ ಬೌದ್ಧಿಕ ವಿಕಸನ. ಅವರ ಪ್ರತಿಭೆೆಗಳಿಗೆ ನೀರೆರೆದು ಬೆಳೆಸುವ ಅವಕಾಶ ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ಶಿಬಿರಗಳೂ ವ್ಯಾಪಾರ ದೃಷ್ಟಿಯನ್ನಿಟ್ಟುಕೊಂಡು ವಾಣಿಜ್ಯೀಕರಣ ಆಗಿವೆ ಎಂಬ ಆರೋಪ ಹೊರಿಸಲು ಆಗದು. ಇಲ್ಲಿ ರಜಾ-ಮಜಾ ಕೊಡುವ, ಮನೆೆಯಿಂದ ಆಚೆ ಇರುವ ಪ್ರಪಂಚವನ್ನು ಬೇರೆ ಬೇರೆ ರೀತಿಯಲ್ಲಿ ತಿಳಿಸಿಕೊಡುವ ಶಿಬಿರಗಳೂ ಇರುತ್ತವೆ.
ಚಿತ್ರಕಲೆ, ಕರ ಕುಶಲ ಕಲೆ ( ಕ್ರಾಫ್ಟ್), ಮುಖವಾಡ ತಯಾರಿ, ಆವೆ ಮಣ್ಣಿನ ಕಲೆ, ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ಮುಖವರ್ಣಿಕೆ ಮತ್ತು ಆಟಗಳನ್ನು ಕಲಿಸುವ ಶಿಬಿರಗಳು ಮಕ್ಕಳಿಗೆ ಬಲು ಇಷ್ಟ.
ಇತ್ತೀಚೆಗೆ ವ್ಯಂಗ್ಯಚಿತ್ರ ಮತ್ತು ರೇಖಾ ಚಿತ್ರಗಳ ಬಗ್ಗೆ ಎರಡು- ಮೂರು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದೆ. ಅಲ್ಲಿನ ಹಿರಿಯ, ಕಿರಿಯ ಮತ್ತು ಕಿರಿಕಿರಿಯ ಮಕ್ಕಳ ಎನರ್ಜಿ ಲೆವೆಲ್ ಹಾಗೂ ಕೆಲವರ ಪ್ರತಿಭೆ ಕಂಡು ಬೆರಗಾದೆ. ಹೊಸ ಪೀಳಿಗೆ ಮನರಂಜನೆಯ ಕಲಿಕೆ ಇಷ್ಟ ಪಡುತ್ತದೆ. ಯಾವುದೇ ವಿಷಯದಲ್ಲಾಗಲಿ ತಮ್ಮನ್ನೂ ತೊಡಗಿಸಿಕೊಂಡು ಕಲಿಯುವ ಇಚ್ಚೆ ಅವರದು. ಆ ಕುರಿತು ಪ್ರಶ್ನೆಗಳನ್ನಿಟ್ಟಾಗ ಚೇಷ್ಟೆ ಮರೆತು ಗಂಭೀರವಾಗಿ ಆಲೋಚಿಸುತ್ತಾರೆ. ಕತೆಗಳನ್ನು ಆಲಿಸುತ್ತಾರೆ. ಮಾತಿಗಿಂತ ಕೃತಿಯೇ ಅವರಿಗೆ ಆಪ್ತವೆನಿಸುತ್ತದೆ. ತನ್ಮಯತೆಯಿಂದ ಸೃಜಾನಾತ್ಮಕವಾಗಿ ತಯಾರುಗೊಳ್ಳುವ ರೀತಿ ಇದುವೇ.
ಹಾವಂಜೆಯ ಭಾವನಾ ಫೌಂಡೇಷನ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ ಐದನೇ ವರ್ಷದ ಬಾಲ ಲೀಲಾ ಎಂಬ ಬೇಸಗೆ ಶಿಬಿರದಲ್ಲಿ ಕಳೆದ ಒಂದು ದಿನ ಇತರ ಎಲ್ಲಾ ಸಮ್ಮರ್ ಕ್ಯಾಂಪ್‌ಗ್ಳಿಗಿಂತ ವಿಶಿಷ್ಟ ಅನುಭವ ನೀಡಿತು. ವ್ಯಂಗ್ಯಚಿತ್ರ ಮತ್ತು ರೇಖಾ ಚಿತ್ರಗಳ ಮೂಲ ವಿಚಾರಗಳನ್ನು ಬರೆಸಿದಾಗ ಅದರೊಳಗೆ ಮಕ್ಕಳು ತಲ್ಲೀನರಾದರು. ಕೆಲವರ ವ್ಯಂಗ್ಯ ಭಾವಚಿತ್ರಗಳನ್ನೂ ಬರೆದಾಗ ನಗುವಿನ ಅಲೆ ಎದ್ದಿತು. ಪೂರ್ಣಗೊಳಿಸುವ ವ್ಯಂಗ್ಯಚಿತ್ರ ಸ್ಪರ್ಧೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಕಲಾತ್ಮಕ ವೇದಿಕೆ, ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಮೂಡಿಸಲು ನಾನಾ ರೀತಿಯ ಚಟುವಟಿಕೆಗಳೊಂದಿಗೆ ಮೋಜುಮಸ್ತಿಗಳಿಂದ ಉಲ್ಲಾಸಮಯ ವಾತಾವರಣ ಸೃಷ್ಟಿಸಿದ ಕಲಾವಿದ ಜನಾರ್ದನ ರಾವ್ ಹಾವಂಜೆ, ಸಹೋದರ ವಿಶುರಾವ್ ಹಾವಂಜೆ ಮತ್ತು ಅವರ ತಂಡದ ಎಲ್ಲಾ ಸದಸ್ಯರು ಅಭಿನಂದನಾರ್ಹರು.
ಜೀವನ್ ಶೆಟ್ಟಿ