ಬೀಜಿಂಗ್: ದಕ್ಷಿಣ ಚೀನಾ ಕರಾವಳಿಯ ವಿವಾದಿತ ಶೋಲಾ ಪ್ರದೇಶದಲ್ಲಿ ಚೀನಾ ಕರಾವಳಿ ಕಾವಲು ಪಡೆಯ ಸಿಬಂದಿಗಳು ಸುಮಾರು ಎಂಟು ಮೋಟಾರ್ ಬೋಟ್ ಗಳಲ್ಲಿ ಆಗಮಿಸಿ, ಫಿಲಿಫೈನ್ಸ್ ನ ಎರಡು ನೌಕಾ ಬೋಟ್ ಗಳನ್ನು ಅಡ್ಡಗಟ್ಟಿ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Vande Bharat Express ರೈಲಿನ ಊಟದಲ್ಲಿ ಜಿರಳೆ ಪತ್ತೆ; ಕ್ಷಮೆಯಾಚಿಸಿದ ಐಆರ್ ಸಿಟಿಸಿ
ಚೀನಾ ಕರಾವಳಿ ಪಡೆ ಗಾರ್ಡ್ ಗಳು ಸುತ್ತಿಗೆ, ಚಾಕು, ಮಚ್ಚುಗಳಿಂದ ಹಡಗನ್ನು ಹಾನಿಗೊಳಿಸಿರುವುದಾಗಿ ವರದಿ ತಿಳಿಸಿದೆ. ಫಿಲಿಫೈನ್ಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಚೀನಾ ಕರಾವಳಿ ಪಡೆ ಗಾರ್ಡ್ಸ್ ಗಳು ಆಹಾರ ಮತ್ತು ಇತರ ವಸ್ತುಗಳನ್ನು ಸಾಗಿಸುತ್ತಿದ್ದ ಬೋಟ್ ಅನ್ನು ಅಡ್ಡಗಟ್ಟಿ ದಾಳಿ ನಡೆಸಿರುವುದಾಗಿ ವಿವರಿಸಿದೆ.
ವಾಗ್ವಾದದ ನಂತರ ಚೀನಾ ಕರಾವಳಿ ಪಡೆ ಗಾರ್ಡ್ ಗಳು ಫಿಲಿಫೈನ್ಸ್ ಹಡಗಿನೊಳಗೆ ಬಂದು ಎಂಟು ಎಂ4 ರೈಫಲ್ಸ್ ಅನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ನ್ಯಾವಿಗೇಶನ್ ಉಪಕರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಹೊತ್ತೊಯ್ದಿರುವುದಾಗಿ ಫಿಲಿಫೈನ್ಸ್ ಅಧಿಕಾರಿಗಳು ದ ಅಸೋಸಿಯೇಟೆಡ್ ಪ್ರೆಸ್ ಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಈ ಸಂದರ್ಭದಲ್ಲಿ ಚೀನಾ ಕರಾವಳಿ ಪಡೆ ಸಿಬಂದಿ ಹಾಗೂ ಫಿಲಿಫೈನ್ಸ್ ನೌಕಾ ಪಡೆ ನಡುವೆ ಘರ್ಷಣೆ ನಡೆದಿದ್ದು, ಓರ್ವ ಸಿಬಂದಿಯ ಹೆಬ್ಬೆರಳು ಕತ್ತರಿಸಿಹೋಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.