ಒಂದಾನೊಂದು ಕಾಲದಲ್ಲಿ ಚೀನಾದಲ್ಲಿ ಮುಲಾನ್ ಎಂಬ ಯುವತಿ ವಾಸಿಸುತ್ತಿದ್ದಳು. ಅವಳ ತಂದೆ ನಿವೃತ್ತ ಸೇನಾಧಿಕಾರಿ. ವಯಸ್ಸಾದ ಕಾರಣ ಅವರು ತುಂಬಾ ಬಳಲಿದ್ದರು. ಮುಂದೆ ಯುದ್ಧ ಮಾಡುವ ಸ್ಥಿತಿಯಲ್ಲೂ ಅವರಿರಲಿಲ್ಲ. ಆದರೆ, ಮಗಳಿಗಾದರೂ ಯುದ್ಧ ಚತುರತೆಯನ್ನು ಕಲಿಸೋಣ ಎಂದು ನಿರ್ಧರಿಸಿ, ಮುಲಾನ್‌ಗೆ ಕತ್ತಿ ವರಸೆ, ಕುದುರೆ ಸವಾರಿ ಮತ್ತಿತರ ಸಾಹಸ ಕ್ರಿಯೆಗಳನ್ನು ಕಲಿಸಿಕೊಟ್ಟರು. ಹೆಣ್ಣುಮಕ್ಕಳಿಗೂ ಯುದ್ಧದಲ್ಲಿ ಹೋರಾಡುವುದು ಗೊತ್ತಿರಬೇಕು ಎಂಬುದು ಅವರ ನಿಲುವಾಗಿತ್ತು.
ಒಂದು ದಿನ, ಅವರ ಗ್ರಾಮಕ್ಕೆ ಸರ್ಕಾರದ ಅಧಿಕಾರಿಗಳು ಆಗಮಿಸಿದರು. ಸದ್ಯದಲ್ಲೇ ದೊಡ್ಡ ಯುದ್ಧ ನಡೆಯಲಿಕ್ಕಿದೆ. ಸೇನೆಗೆ ಜನರ ಅಗತ್ಯವಿದೆ ಎಂದರು ಅಧಿಕಾರಿಗಳು. ಅಷ್ಟೇ ಅಲ್ಲ, ಗ್ರಾಮದ ಕೇಂದ್ರದಲ್ಲಿ ಪ್ರತಿ ಕುಟುಂಬದ ಒಬ್ಬರು ಯುದ್ಧದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಲಿಸ್ಟ್ ತಯಾರಿಸಿ, ಅಂಟಿಸಿದರು. ಆ ಪಟ್ಟಿಯಲ್ಲಿ ಮುಲಾನ್‌ಳ ತಂದೆಯ ಹೆಸರೂ ಇತ್ತು. ಆದರೆ, ಅಪ್ಪ ಯುದ್ಧ ಮಾಡಲು ಶಕ್ತರಲ್ಲ. ಯುದ್ಧಕ್ಕೆ ಹೋದರೆ ಅವರು ಜೀವಂತವಾಗಿ ಮರಳಲಾರರು ಎಂಬುದು ಆಕೆಗೆ ಗೊತ್ತಿತ್ತು. ಇನ್ನು ತಮ್ಮನೋ ತುಂಬಾ ಚಿಕ್ಕವನು. ಅವನಿಗೆ ಸೇನೆಯೆಂದರೆ ಏನೆಂದೇ ಗೊತ್ತಿಲ್ಲ. ಈಗ ಅಪ್ಪನ ಸ್ಥಾನವನ್ನು ತುಂಬಲು ಇರುವವಳು ನಾನೊಬ್ಬಳೇ. ಆದರೆ, ಸೇನೆಯವರು ಹೆಣ್ಣುಮಕ್ಕಳನ್ನು ನಿಯೋಜಿಸಿಕೊಳ್ಳುವುದಿಲ್ಲವಲ್ಲ ಎಂದು ಯೋಚಿಸುತ್ತಾ ಚಿಂತಾಕ್ರಾಂತಳಾಗುತ್ತಾಳೆ ಮುಲಾನ್. ಕೊನೆಗೆ ಆದದ್ದಾಗಲಿ ಎಂದು ದೃಢ ನಿರ್ಧಾರ ಕೈಗೊಂಡು, ಅಪ್ಪನಿಗೆ ಗೊತ್ತಾಗದಂತೆ ಅವರ ಸಮವಸ್ತ್ರವನ್ನು ಕದ್ದು, ಪುರುಷರಂತೆ ವೇಷ ಧರಿಸಿ, ಸೇನೆಗೆ ಸೇರಿದಳು. ಯಾರಿಗೂ ಅನುಮಾನ ಬಾರದಂತೆ ತುಂಬಾ ಎಚ್ಚರಿಕೆ ವಹಿಸಿದಳು.
ಯುದ್ಧ ಮುಗಿಯಿತು. ಶತ್ರುಗಳ ವಿರುದ್ಧ ವೀರಾವೇಶವಾಗಿ ಹೋರಾಡಿದ್ದಕ್ಕೆ ಆ ರಾಜ್ಯದ ದೊರೆಯು ಮುಲಾನ್‌ಳನ್ನು ಕರೆದು, ವಿಶಿಷ್ಟ ಸೇನಾ ಪದಕ ನೀಡಿ ಗೌರವಿಸಿದ. ಜೊತೆಗೆ, ಅವಳಿಗೊಂದು ಕುದುರೆ ಹಾಗೂ ಸಾಕಷ್ಟು ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿ, ಕಳುಹಿಸಿಕೊಟ್ಟ. ಮುಲಾನ್, ವಾಪಸ್ ಮನೆಗೆ ಹೋಗಿ ಅಪ್ಪ ಹಾಗೂ ತಮ್ಮನಿಗೆ ಎಲ್ಲ ವಿಚಾರ ತಿಳಿಸಿ, ಮತ್ತೆ ಹಿಂದಿನಂತೆ ಮನೆಯ ಹೆಣ್ಣುಮಗಳಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಳು.
ಹೀಗಿದ್ದಾಗ ಒಂದು ದಿನ, ಯುದ್ಧದಲ್ಲಿ ಮುಲಾನ್ ಜೊತೆಗೆ ಹೋರಾಡಿದ್ದ ಇಬ್ಬರು ಸೈನಿಕರು, ಮುಲಾನ್‌ಳ ಮನೆ ಮುಂದಿನ ದಾರಿಯಲ್ಲಿ ಸಾಗುತ್ತಿದ್ದರು. ಆಗ “ಗೆಳೆಯ’ನನ್ನೊಮ್ಮೆ ಭೇಟಿಯಾಗೋಣ ಎಂದು ಯೋಚಿಸುತ್ತಾ, ಮುಲ್ತಾನ್‌ಳ ಮನೆಗೆ ಬಂದರು. ಆದರೆ, ಅವಳನ್ನು ನೋಡುತ್ತಿದ್ದಂತೆಯೇ ಅವರಿಗೆ ಪರಮಾಶ್ಚರ್ಯ. “ನಾನೇ ಮುಲಾನ್’ ಎಂದು ಆಕೆ ಎಷ್ಟೇ ಹೇಳಿದರೂ, ನಂಬುವ ಸ್ಥಿತಿಯಲ್ಲಿ ಅವರಿರಲ್ಲ. “ಊಹೂಂ, ನೀನು ಮುಲಾನ್ ಆಗಿರಲು ಸಾಧ್ಯವೇ ಇಲ್ಲ. ನಮ್ಮ ಗೆಳೆಯ ಮುಲ್ತಾನ್ ಗಂಡು, ಹೆಣ್ಣಲ್ಲ’ ಎನ್ನುತ್ತಾರೆ. ಕೊನೆಗೆ, ಮುಲಾನ್ ನಡೆದ ಕಥೆಯನ್ನೆಲ್ಲಾ ಅವರಿಗೆ ವಿವರಿಸುತ್ತಾಳೆ.
ಕಥೆಯೆಲ್ಲ ಕೇಳಿದ ಆ ಸೈನಿಕರು, ದಿಟ್ಟತನದಿಂದ ಶತ್ರುಗಳ ವಿರುದ್ಧ ಹೋರಾಡಿದ ಹೆಣ್ಣುಮಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಅಷ್ಟೇ ಅಲ್ಲ, ಆಕೆಯ ಶೌರ್ಯದ ಕಥೆಯನ್ನು ಚೀನಾದ ಮೂಲೆ ಮೂಲೆಗೂ ತಲುಪಿಸಿದರು. ಮುಲಾನ್‌ಳ ಕಥೆಯಿಂದ ಸ್ಫೂರ್ತಿ ಪಡೆದು, ಬಹಳಷ್ಟು ಹೆಣ್ಣುಮಕ್ಕಳು ಕುದುರೆ ಸವಾರಿ, ಕತ್ತಿವರಸೆಯನ್ನು ಕಲಿತು, ವೀರವನಿತೆಯರಾಗಿ ಬದಲಾದರು.
ಹಲೀಮತ್ ಸ ಅದಿಯ