ಬೀಜಿಂಗ್: ಎಚ್ಚರ, ಎಚ್ಚರ, ಎಚ್ಚರ… ಚೀನ ಹಾರಿಸಿದ್ದ ಒಂದು ರಾಕೆಟ್ ನಿಯಂತ್ರಣ ತಪ್ಪಿ ಭೂಮಿಯ ಸುತ್ತ ಸುತ್ತುತ್ತಿದೆ. ಇದು ಯಾವುದೇ ದಿನ, ಭೂಮಿಯ ಯಾವುದೇ ಜನವಸತಿ ಭಾಗದ ಮೇಲೆ ಬೀಳುವ ಸಾಧ್ಯತೆ ಇದೆ!
ಈ ಸಂಬಂಧ ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಚೀನವು ತನ್ನ ಹೊಸ ಬಾಹ್ಯಾಕಾಶ ನಿಲ್ದಾಣಕ್ಕಾಗಿ ಎ. 23ರಂದು ಲಾಂಗ್ ಮಾರ್ಚ್-5ಬಿ ವೈ2 ಎಂಬ ರಾಕೆಟ್ ಉಡಾಯಿಸಿತ್ತು. ಇದರಲ್ಲಿ ನೂತನ ಬಾಹ್ಯಾಕಾಶ ನಿಲ್ದಾಣಕ್ಕೆ ಬೇಕಾದ ಮೊದಲ ಘಟಕವನ್ನು ಹೊತ್ತೂಯ್ಯಲಾಗಿತ್ತು. ಕಳೆದ ಬುಧವಾರವಷ್ಟೇ ಭೂಮಿಯತ್ತ ಈ ರಾಕೆಟ್ ವಾಪಸ್ ಹೊರಟಿದ್ದು, ನಿಯಂತ್ರಣ ತಪ್ಪಿದೆ. ರಾಕೆಟ್‌ನ ಮುಖ್ಯ ಅಂಗ ಬೇರ್ಪಟ್ಟಿದ್ದು, ಇದು ಸಮುದ್ರದಲ್ಲಿ ಬೀಳಬೇಕು. ಆದರೆ ಈಗ ನಿಯಂತ್ರಣ ತಪ್ಪಿದೆ.
ಈಗ ಬೇರ್ಪಟ್ಟಿರುವ ಮುಖ್ಯ ಅಂಗದ ತೂಕ 21 ಟನ್. 100 ಅಡಿ ಉದ್ದವಿದ್ದು, 16 ಅಡಿ ಅಗಲವಿದೆ. ಸಾಮಾನ್ಯವಾಗಿ ರಾಕೆಟ್‌ನ ಅಂಗ ಈ ರೀತಿ ಬೇರ್ಪಟ್ಟು ಭೂಮಿಯ ಕಕ್ಷೆ ಸೇರಿದಾಗ ಉರಿದುಹೋಗುತ್ತವೆ. ಆದರೆ ಬೃಹತ್ ಗಾತ್ರದ ವಸ್ತುಗಳು ಉರಿದು ನಾಶವಾಗುವುದಿಲ್ಲ.
ಜನವಸತಿ ಕೇಂದ್ರಗಳಿಗೆ ಅಪಾಯ :
ರಾಕೆಟ್‌ನ ಈ ಅಂಗ ಜನವಸತಿ ಕೇಂದ್ರಗಳ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ವಿಜ್ಞಾನಿ ಗಳು ಎಚ್ಚರಿಕೆ ನೀಡಿದ್ದಾರೆ. ನ್ಯೂಯಾರ್ಕ್, ಮ್ಯಾಡ್ರಿಡ್, ಬೀಜಿಂಗ್, ದಕ್ಷಿಣ ಚಿಲಿ ಮತ್ತು ನ್ಯೂಜಿಲೆಂಡ್‌ನಲ್ಲಿ ಬೀಳುವ ಸಾಧ್ಯತೆ ಹೆಚ್ಚಿದೆ.