ನವದೆಹಲಿ: ಗಡಿಯಲ್ಲಿ ಕೆಲ ಕಾಲದಿಂದ ತಂಟೆ ಮಾಡದೇ ಉಳಿದಿದ್ದ ಚೀನಾ ಸೇನೆ, ಮತ್ತೆ ತಂಟೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆ. 30ರಂದು ಉತ್ತರಾಖಂಡದ ಬಾರಾಹೋತಿಯಲ್ಲಿರುವ ಗಡಿ ಪ್ರದೇಶಕ್ಕೆ ಕುದುರೆಗಳನ್ನೇರಿ ಯೋಧರ ತುಕಡಿ ಆಗಮಿಸಿತ್ತು. ಅಲ್ಲಿ ನಡೆದುಕೊಂಡು ಹೋಗಲು ರಚಿಸಲಾಗಿದ್ದ ಸೇತುವೆಯನ್ನು ಚೀನಾ ಯೋಧರು ಧ್ವಂಸ ಮಾಡಿದ್ದಾರೆ. ಅವರು ಸುಮಾರು ಮೂರು ಗಂಟೆಗಳ ಕಾಲ ಅಲ್ಲಿ ಇದ್ದರು. ಚೀನಾ ಸೈನಿಕರು ಬಂದಿದ್ದ ಬಗ್ಗೆ ಸುದ್ದಿ ತಿಳಿದ ಭೂಸೇನೆಯ ಒಂದು ತುಕಡಿ, ಐಟಿಬಿಪಿ ಯೋಧರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಅವರು ಪರಾರಿಯಾಗಿದ್ದರು.
ಈ ಸಂದರ್ಭದಲ್ಲಿ, ಎರಡೂ ಬದಿಯ ಸೈನಿಕರು ಮುಖಾಮುಖೀಯಾಗುವ ಪ್ರಸಂಗ ನಡೆದಿಲ್ಲ. ಘಟನೆ ಬಗ್ಗೆ ತಮ್ಮ ಸರ್ಕಾರಕ್ಕೆ ಯಾವುದೇ ಮಾಹಿತಿಯಿಲ್ಲ ಎಂದು ಉತ್ತರಾಖಾಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಇದನ್ನೂ ಓದಿ:ಆರ್ಥಿಕ ಸಮಾನತೆಯಿಂದ ಮತಾಂತರ ತಡೆ ಸಾಧ್ಯ: ಪೇಜಾವರ ಸ್ವಾಮೀಜಿ
ಪೂರ್ವ ಲಡಾಖ್ ಪ್ರಾಂತ್ಯದಲ್ಲಿ, 17 ತಿಂಗಳುಗಳಿಂದ ತನ್ನ ಸೈನಿಕರನ್ನು ಅಕ್ರಮವಾಗಿ ಇರಿಸಿರುವ ಚೀನಾ, ಆ ಪ್ರದೇಶದಲ್ಲಿ ತನ್ನ ಸೈನಿಕರಿಗಾಗಿ ಕಂಟೈನರ್ ಆಧಾರಿತ ವಸತಿ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ, ಆಮ್ಲಜಕ ಪೂರೈಕೆ ವ್ಯವಸ್ಥೆ ಹಾಗೂ ಕ್ಷಿಪಣಿ ಉಡಾವಣಾ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಟ್ಟಿರುವುದಾಗಿ ಹೇಳಲಾಗಿದೆ.