Advertisement

ಚೀನಕ್ಕೆ ಮಾತಿನ ಪೆಟ್ಟು; ರಕ್ಷಣಾ ಸಚಿವ ಜೇಟ್ಲಿ ನೇರ ಎಚ್ಚರಿಕೆ

03:45 AM Jul 01, 2017 | Team Udayavani |

ಹೊಸದಿಲ್ಲಿ: “1962ರ ಸ್ಥಿತಿಯೇ ಬೇರೆ, 2017ರ ಸ್ಥಿತಿಯೇ ಬೇರೆ.’ ಇದು ಚೀನಕ್ಕೆ ರಕ್ಷಣಾ ಸಚಿವ ಅರುಣ್‌ ಜೇಟ್ಲಿ ನೀಡಿದ ಎಚ್ಚರಿಕೆ. ಗುರುವಾರವಷ್ಟೇ ಸಿಕ್ಕಿಂ ಗಡಿಯಲ್ಲಿನ ಭಾರತ ಮತ್ತು ಚೀನದ ತಿಕ್ಕಾಟದ ಸಂಬಂಧ ಅಲ್ಲಿನ ವಿದೇಶಾಂಗ ಇಲಾಖೆ, “ಭಾರತ ಒಮ್ಮೆ ಇತಿಹಾಸ ತೆರೆದು ನೋಡಲಿ, ಗಡಿಯಲ್ಲಿನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಿ’ ಎಂದು ಹೇಳಿತ್ತು. 

Advertisement

ಈ ವರೆಗೆ ಚೀನದ ಕೆಣಕುವ ವರ್ತನೆ ಯನ್ನು ನೋಡಿಯೂ ಸುಮ್ಮನಿದ್ದ ಭಾರತ, ಇತಿಹಾಸ ಪಾಠದ ಎಚ್ಚರಿಕೆ ನೀಡುತ್ತಿದ್ದಂತೆ ತಿರುಗಿಬಿದ್ದಿದೆ. 1962ರ ಭಾರತದ ಸ್ಥಿತಿ ಗತಿಗೂ 2017ರ ಭಾರತದ ಸ್ಥಿತಿಗತಿಗೂ ವ್ಯತ್ಯಾಸವಿದೆ. 1962ರ ಪರಿಸ್ಥಿತಿಯ ಬಗ್ಗೆ ಚೀನ ಈಗ ನಮಗೆ ಪಾಠ ಮಾಡಲು ಹೊರಟಿದೆ. ಆದರೆ, ನಾವು ಅಂದಿನಂತಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. 

ಭೂತಾನ್‌ ಸರಕಾರದ ಹೇಳಿಕೆಯ ಬಳಿಕ ಗಡಿಯಲ್ಲಿನ ಚಿತ್ರಣ ಏನೆನ್ನುವುದು ಸ್ಪಷ್ಟವಾಗಿದೆ. ಭಾರತದ ಗಡಿಯಲ್ಲೇ ಇರುವ ಆ ಪ್ರದೇಶ ಭೂತಾನ್‌ ರಾಷ್ಟ್ರಕ್ಕೆ ಸೇರಿದ್ದು. ಇದನ್ನು ಭೂತಾನ್‌ ಮತ್ತು ಭಾರತ ಜಂಟಿಯಾಗಿ ರಕ್ಷಿಸಿಕೊಳ್ಳುತ್ತಿದೆ. ಚೀನ ಈಗ ಏನು ಮಾಡಲು ಮುಂದಾಗಿದೆ ಎನ್ನುವುದು ಉಳಿದ ರಾಷ್ಟ್ರಗಳಿಗೂ ಗೊತ್ತಾಗಿದೆ ಎಂದಿದ್ದಾರೆ.

ಸಂದಿಗ್ಧತೆ ಉಂಟಾಗುತ್ತದೆ: ಈ ಮಧ್ಯೆ ಚೀನದ ಉದ್ಧಟತನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ, ಇದೇ ರೀತಿ ದ್ವಿಪಕ್ಷೀಯ ಒಪ್ಪಂದವನ್ನು ಗೌರವಿಸದೆ ಸಿಕ್ಕಿಂ ಗಡಿಯಲ್ಲಿ ರಸ್ತೆ ನಿರ್ಮಾಣದ ಮೂಲಕ ರಾಜತಾಂತ್ರಿಕ ಸಮಸ್ಯೆ ಸೃಷ್ಟಿಸಿದರೆ ಗಂಭೀರವಾದ ರಕ್ಷಣಾ ಸಂದಿಗ್ಧತೆ ಎದುರಿಸಬೇಕಾಗುತ್ತದೆ ಎಂದಿದೆ. ಈ ಬೆನ್ನಿಗೇ ಚೀನ ಪ್ರತಿಕ್ರಿಯಿಸಿ, “ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ಮಾತುಕತೆಗೆ ಮುಂದಾಗಲಿ’ ಎಂದು ಹೇಳಿದೆ.
ಚೀನ ಯೋಧರು ಸಿಕ್ಕಿಂ ಗಡಿಯಲ್ಲಿ ಭಾರತೀಯ ಯೋಧರ ಜತೆ ತಳ್ಳಾಟ ನಡೆಸಿ, ಎರಡು ಬಂಕರ್‌ ನಾಶಪಡಿಸಿದಾಗಲೂ ಭಾರತ ಕೈಲಾಸ್‌ ಮಾನಸ ಸರೋವರ ಯಾತ್ರೆ ರದ್ದು ನಾಥು ಲಾ ಗಡಿ ಮಾರ್ಗದ ಮೂಲಕ ಸಾಗಬೇಕಾಗಿದ್ದ  ಕೈಲಾಸ್‌ ಮಾನಸ ಸರೋವರ ಯಾತ್ರೆ ಈಗ ಅಧಿಕೃತವಾಗಿ ರದ್ದಾಗಿದೆ. ಸ್ವತಃ ಅಧಿಕಾರಿಗಳೇ ಇದನ್ನು ಪ್ರಕ ಟಿಸಿದ್ದಾರೆ. ಆದರೆ ಉತ್ತರಾಖಂಡ- ಲಿಪುಲೇಕ್‌ (ಟಿಬೆಟ್‌) ಕಾಲುದಾರಿ ಯಲ್ಲಿ  ಸಾಗಲು ಅಭ್ಯಂತರವಿಲ್ಲ ಎಂದು ಸರಕಾರ ತಿಳಿಸಿದೆ.

ಚೀನ ಸಿಕ್ಕಿಂ ಗಡಿಯಲ್ಲಿ ಕ್ಯಾತೆ ಎತ್ತಿದ ಪರಿಣಾಮ ಕಳೆದ ಹತ್ತನ್ನೆರಡು ದಿನಗಳಿಂದ ನಾಥು ಲಾ ದ್ವಾರವನ್ನು ಚೀನ ಬಂದ್‌ ಮಾಡಿದ್ದರಿಂದ ಕೈಲಾಸ್‌ ಮಾನಸ ಸರೋವರ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ವಿದೇಶಾಂಗ ಸಚಿವಾಲಯ ಮೌನ ಮುರಿದಿರಲಿಲ್ಲ. ಆದರೆ ಚೀನಿಯರ ಉಪಟಳ ಉಲ್ಬಣಿಸಿದ್ದರಿಂದ ಶುಕ್ರವಾರ ಈ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Advertisement

ಸಿಕ್ಕೀಂ ಗಡಿ ವಿಚಾರವಾಗಿ ಉಳಿದ ರಾಷ್ಟ್ರಗಳೊಂದಿಗೂ ಚರ್ಚಿಸಿ ಶಾಂತಿಯಿಂದಲೇ ಬಗೆಹರಿಸಿಕೊಳ್ಳುವುದಾಗಿ 2012ರ ದ್ವಿಪಕ್ಷೀಯ ಒಪ್ಪಂದ ಮೆಲುಕು ಹಾಕಿರುವ ಭಾರತ, “ಇದಕ್ಕೆ ಕಿಂಚಿತ್ತೂ ಗೌರವ ಕೊಡದೆ ಚೀನ ಈ ಕ್ರಮಕ್ಕೆ ಮುಂದಾಗಿರುವುದು ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಲಿದೆ’ ಎಂದಿದೆ. ವಿವಾದದಲ್ಲಿ ಭಾರತವನ್ನು ಮೂರನೇ ವ್ಯಕ್ತಿ ಯನ್ನಾಗಿ ಪರಿಗಣಿಸುತ್ತಿರುವ ಚೀನದ ಪ್ರಚೋದನಕಾರಿ ನಡೆಗೆ ಭಾರತ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಜೂ. 16ರಿಂದ ಗಡಿಯಲ್ಲಿ ಆಗುತ್ತಿರುವ ಪ್ರತಿಯೊಂದು ಚಟುವಟಿಕೆಗಳನ್ನು ಸೂಕ್ಷ್ಮವಾಗಿಯೇ ನೋಡುತ್ತಿದ್ದು, ಪ್ರಕರಣವನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಭೂತಾನ್‌ ಸರಕಾರದ ಸಹಕಾರದೊಂದಿಗೆ ಡೋಕಾ ಲಾ ಪ್ರದೇಶದಲ್ಲಿ ಶಾಂತಿಯಿಂದಲೇ ಗಡಿ ರಕ್ಷಣಾ ಕಾರ್ಯ ಮಾಡಿಕೊಳ್ಳಲಾಗುತ್ತಿದೆ. ಇದು ಮುಂದುವರಿಯಲಿದೆ ಎಂದು ಹೇಳುವ ಮೂಲಕ ಸೈನ್ಯವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದೆ.

ಹಠಮಾರಿತನ ಬಿಡದ ಚೀನ
ಸಿಕ್ಕೀಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಮಾತುಕತೆಗೆ ಮುಂದಾಗಿರುವುದಾಗಿ ಚೀನ ಹೇಳಿಕೊಂಡಿದೆ. ಆದರೆ ಇದೇ ವೇಳೆ, ಗಡಿಯಿಂದ ಭಾರತ ಸೈನ್ಯವನ್ನು ಮೊದಲು ಹಿಂದಕ್ಕೆ ಪಡೆದುಕೊಳ್ಳಲಿ. ಆಮೇಲೆ ಮಾತುಕತೆಗೆ ಸಿದ್ಧ ಎಂದು ಮತ್ತೆ ಪುನರುಚ್ಚರಿಸಿದೆ.

ಸಂಗಮ ಪ್ರದೇಶದ ಮೇಲೆ ಯಾವುದೇ ವಿವಾದವೂ ಇಲ್ಲದೇ ಚೀನ ಸಾರ್ವಭೌಮತ್ವ ಹೊಂದಿರುವುದಾಗಿ ಹೇಳಿರುವ ಚೀನ, “ಜೂ. 18ರಂದು ಭಾರತೀಯ ಸೈನಿಕರೇ ಗಡಿ ನಿಯಮ ಉಲ್ಲಂ ಸಿ ಒಳ ಪ್ರವೇಶಿಸಲು ಯತ್ನಿಸಿದ್ದು. ರಾಜತಾಂತ್ರಿಕ ದಾರಿಗಳ ಮೂಲಕವೇ ಭಾರತದೊಂದಿಗೆ ಮಾತುಕತೆ ನಡೆಸುತ್ತೇವೆ’ ಎಂದು ಚೀನ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಹೇಳಿದ್ದಾರೆ. ಇಂಥದ್ದೊಂದು ಹೇಳಿಕೆ ನೀಡುವ ಮೂಲಕ ಹಿತ್ತಲಿನ ಬಾಗಿಲಲ್ಲಿ ಬಂದು ಚಿವುಟಿ ಮರೆಯಲ್ಲಿ ನಿಂತು ನೋಡುವ ಯತ್ನಕ್ಕೆ ಮುಂದಾಗಿದೆ. 

1962ರ ಭಾರತದ ಸ್ಥಿತಿಗತಿಗೂ 2017ರ ಭಾರತದ ಸ್ಥಿತಿಗತಿಗೂ ವ್ಯತ್ಯಾಸವಿದೆ. 1962ರ ಪರಿಸ್ಥಿತಿಯ ಬಗ್ಗೆ ಚೀನ ಈಗ ನಮಗೆ ಪಾಠ ಮಾಡಲು ಹೊರಟಿದೆ. ಅಂದಿನ ಭಾರತಕ್ಕೂ ಇಂದಿನ ಭಾರತಕ್ಕೂ ಬಹಳ ವ್ಯತ್ಯಾಸವಿದೆ.
ಅರುಣ್‌ ಜೇಟ್ಲಿ, ವಿತ್ತ, ರಕ್ಷಣಾ ಸಚಿವರು
 

Advertisement

Udayavani is now on Telegram. Click here to join our channel and stay updated with the latest news.

Next