ಬೀಜಿಂಗ್: ತಿನ್ನುವ ಚಾಲೆಂಜ್ ನಲ್ಲಿ ಭಾಗವಹಿಸಿದ್ದ ಸಾಮಾಜಿಕ ಜಾಲತಾಣದ ತಾರೆಯೊಬ್ಬರು ನೇರಪ್ರಸಾರ ನಡೆಯುತ್ತಿದ್ದ ಸಮಯದಲ್ಲೇ ಮೃತಪಟ್ಟ ಘಟನೆ ಚೀನಾದಲ್ಲಿ ನಡೆದಿದೆ. ಜುಲೈ 14ರಂದು ಈ ಘಟನೆ ನಡೆದಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದೆ.
24 ವರ್ಷದ ಪ್ಯಾನ್ ಕ್ಸಿಯಾಟಿಂಗ್ ಅವರು 10 ಗಂಟೆಗಳಿಗೂ ಹೆಚ್ಚು ಕಾಲ ತಿನ್ನುವಂತಹ ಸವಾಲುಗಳನ್ನು ತೆಗೆದುಕೊಳ್ಳಲು ಹೆಸರುವಾಸಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ಸಿಯಾಟಿಂಗ್ ಪ್ರತಿ ಊಟಕ್ಕೆ 10 ಕೆಜಿ ಆಹಾರವನ್ನು ಸೇವಿಸುತ್ತಿದ್ದರು. ಆಕೆಯ ಪೋಷಕರು ಮತ್ತು ಹಿತೈಷಿಗಳ ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ, ಕ್ಸಿಯಾಟಿಂಗ್ ಅದನ್ನು ಮುಂದುವರಿಸಲು ನಿರ್ಧರಿಸಿದ್ದರು ಎಂದು ಕ್ರೆಡರ್ಸ್ ಎಂಬ ವೆಬ್ ಸೈಟ್ ವರದಿ ತಿಳಿಸಿದೆ.
ಕ್ಸಿಯಾಟಿಂಗ್ ಅವರ ಮರಣೋತ್ತರ ವರದಿಯಲ್ಲಿ, ಆಕೆಯ ಹೊಟ್ಟೆಯು “ವಿರೂಪಗೊಂಡಿದೆ” ಮತ್ತು “ಜೀರ್ಣವಾಗದ ಆಹಾರ” ವನ್ನು ಹೊಂದಿದೆ ಎಂದು ಉಲ್ಲೇಖಿಸಲಾಗಿದೆ.
ಕ್ಸಿಯಾಟಿಂಗ್ ಅವರ ಸಾವು ಸಾಮಾಜಿಕ ಮಾಧ್ಯಮದಲ್ಲಿ ಆರೋಗ್ಯ ಕಾಳಜಿಯನ್ನು ಉಂಟುಮಾಡಿದೆ. ಅಂತಹ ಸವಾಲುಗಳನ್ನು ನಡೆಸುವ ಅಗತ್ಯವನ್ನು ಕೆಲವರು ಪ್ರಶ್ನಿಸಿದ್ದಾರೆ.