ಕೋವಿಡ್ ಸೋಂಕಿನಿಂದ ತೀವ್ರವಾಗಿ ಬಳಲಿ ಕಡೆಗೆ ಗುಣಮುಖರಾಗಿದ್ದ ಚೀನದ ಇಬ್ಬರು ವೈದ್ಯರ ದೇಹದ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದೆ. ವೈರಾಣು ಶ್ವಾಸಕೋಶವನ್ನು ಹಾನಿಗೊಳಿಸಿರುವುದೇ ಚರ್ಮ ಕಪ್ಪಾಗಲು ಕಾರಣ ಎಂದು ತಿಳಿದುಬಂದಿದೆ. ಈ ಮೂಲಕ ಸೋಂಕಿನಿಂದ ಗುಣಮುಖರಾಗಿ ನಿಟ್ಟುಸಿರು ಬಿಟ್ಟವರನ್ನೂ ವೈರಸ್ ಕಾಡಲಿದೆ ಎಂಬ ಆತಂಕ ಶುರುವಾಗಿದೆ!
ಜನವರಿಯಲ್ಲಿ ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಡಾ. ಯಿ ಫ್ಯಾನ್ ಮತ್ತು ಡಾ. ಹು ವೈಫೆಂಗ್ ಎಂಬುವರು ಸೋಂಕು ತಗುಲಿ, ಉಸಿರಾಟದ ತೊಂದರೆ ಅನುಭವಿಸಿದ್ದರು. ಕೃತಕ ಉಸಿರಾಟದ ನೆರವಿನಿಂದ ಇಬ್ಬರೂ ಬದುಕುಳಿದಿದ್ದರು. ಬಳಿಕ ಅವರ ದೇಹದ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿತ್ತು.
ಈ ಕುರಿತು ಚೀನದ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವೈದ್ಯರು, ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ವೈರಾಣು ಶ್ವಾಸಕೋಶಕ್ಕೆ ತೀವ್ರ ಹಾನಿ ಮಾಡಿತ್ತು. ಇದರಿಂದ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗಿರುವುದೇ ದೇಹದ ಚರ್ಮ ಕಪ್ಪು ಬಣ್ಣಕ್ಕೆ ತಿರುಗಲು ಕಾರಣ ಎಂದು ತಿಳಿಸಿದ್ದಾರೆ. ಸೋಂಕಿತರ ಶ್ವಾಸಕೋಶಕ್ಕೆ ಆಗಿರುವ ಹಾನಿ ಗುಣವಾಗದೇ ಇದ್ದರೆ ಗುಣ ಮುಖರಾದವರೂ ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮುತ್ತಿನ ವಿಚಿತ್ರ ಸ್ಪರ್ಧೆ
ಚೀನ ಇದೀಗ ನಿಧಾನವಾಗಿ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಿದೆ. ಹಲವಾರು ದಿನಗಳಿಂದ ದಿಗ್ಬಂಧನದಲ್ಲಿದ್ದ ಜನರು ಈಗ ಲಾಕ್‌ಡೌನ್ ಅನ್ನು ಕೆಲವು ನಗರಗಳಲ್ಲಿ ಸಡಿಲಗೊಳಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಸುಝುವ್ ನಗರದ ಪೀರೋಪಕರಣ ಸಂಸ್ಥೆ ಮುತ್ತಿನ ಸ್ಪರ್ಧೆ ಏರ್ಪಡಿಸಿದೆ. ಗಾಜಿನ ಪರದೆಯ ನಡುವೆ ಇಬ್ಬರು ಪ್ರೇಮಿಗಳು ನಿಂತು ಮುಖಾಮುಖೀಯಾಗಿ ಚುಂಬಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕೋವಿಡ್ ಲಸಿಕೆ: ಚೀನದಲ್ಲಿ ಕೋವಿಡ್ ರೋಗಿಗಳ ಪರೀಕ್ಷೆ, ಶುಶ್ರೂಷೆಯಲ್ಲಿ ತೊಡಗಿರುವ ವೈದ್ಯರಿಗೆ ಈ ವರ್ಷಾಂತ್ಯದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಚೀನದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ)ತಿಳಿಸಿದೆ. ಲಸಿಕೆ ನೀಡುವಿಕೆಯಿಂದ ಅವರಿಗೆ ಸೋಂಕು ತಗಲುವ ಸಾಧ್ಯತೆ ಇರುವುದಿಲ್ಲ ಎಂದಿದೆ.