ನವದೆಹಲಿ: ಲಡಾಖ್ ಗಡಿಯಲ್ಲಿ ತನ್ನ ಒಂದಿಂಚು ಜಾಗ ಬಿಟ್ಟುಕೊಡಲು ಸಿದ್ದವಿಲ್ಲ ಎಂದು ಚೀನಾ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕಳೆದ 80 ದಿನಗಳಲ್ಲಿ ಚೀನಾ ರಕ್ಷಣಾ ಸಚಿವ ವೈ ಫೆಂಘೆ ಅವರು ಮಾತುಕತೆ ನಡೆಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಳಿ ಮೂರು ಬಾರಿ ಗೋಗರೆದಿರುವುದಾಗಿ ವರದಿ ತಿಳಿಸಿದೆ.
ಲಡಾಖ್ ಬಿಕ್ಕಟ್ಟು ಬಗೆಹರಿಕೆಗೆ ಸಂಬಂಧಿಸಿದಂತೆ ಚೀನಾ ರಕ್ಷಣಾ ಸಚಿವ ಫೆಂಘೆ ಅವರು ಮಾಸ್ಕೋ ಸಭೆಯಲ್ಲಿ ಭಾಗಿಯಾಗುವಂತೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಮನವಿ ಮಾಡಿಕೊಂಡಿದ್ದರು. ಅದರಂತೆ ಶನಿವಾರ ಮಾಸ್ಕೋದಲ್ಲಿ ನಡೆದ ಸಭೆಯಲ್ಲಿ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಸಚಿವ ವೈ ಫೆಂಘೆ ಭಾಗವಹಿಸಿದ್ದರು.
ಕಳೆದ ನಾಲ್ಕು ತಿಂಗಳಿನಿಂದ ಜಮ್ಮು-ಕಾಶ್ಮೀರದ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷ ಮುಂದುವರಿದಿತ್ತು. ಅಲ್ಲದೇ ಕಳೆದ ವಾರ ಭಾರತದ ಭೂ ಭಾಗವನ್ನು ಆಕ್ರಮಿಸಲು ಬಂದಿದ್ದ ಚೀನಾ ಪಡೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿತ್ತು. ಅಲ್ಲದೇ ಗಡಿಯಲ್ಲಿ ಸಮರ ಸಿದ್ಧತೆಯನ್ನು ಮಾಡಿಕೊಂಡಿತ್ತು. ಇದರಿಂದಾಗಿ ಚೀನಾ ಮಾತುಕತೆಗೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಕಳೆದ 80 ದಿನಗಳಲ್ಲಿ ಚೀನಾ ರಕ್ಷಣಾ ಸಚಿವ ಫೆಂಘೆ ಅವರು ಮಾತುಕತೆಗೆ ಬರುವಂತೆ ಮೂರು ಬಾರಿ ಮನವಿ ಮಾಡಿಕೊಂಡಿರುವುದಾಗಿ ಭಾರತದ ರಕ್ಷಣಾ ಸಚಿವರ ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಭಾರತದ ರಕ್ಷಣಾ ಸಚಿವರು (ರಾಜನಾಥ್ ಸಿಂಗ್) ಉಳಿದುಕೊಂಡಿದ್ದ ಹೋಟೆಲ್ ಗೆ ಚೀನಾ ರಕ್ಷಣಾ ಸಚಿವ ಮಾತುಕತೆಗೆ ಆಗಮಿಸುವುದಾಗಿ ತಿಳಿಸಿದ್ದರಂತೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾಸ್ಕೋಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಭೆ ನಡೆಸಲು ಹಸಿರು ನಿಶಾನೆ ತೋರಿಸಿದ್ದರು. ಆದರೆ ಬೇರೆ ಯಾವುದೇ ಮಾತುಕತೆಗೆ ಅವಕಾಶ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿರುವುದಾಗಿ ವರದಿ ತಿಳಿಸಿದೆ.
ಗಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆದರೆ ಭಾರತೀಯ ಯೋಧರ ಪ್ರತಿರೋಧಕ್ಕೆ 40ರಿಂದ 45 ಮಂದಿ ಚೀನಾ ಯೋಧರು ಸಾವನ್ನಪ್ಪಿದ್ದರು.
ಈ ಘಟನೆ ಬಳಿಕ ಬಿಸಿ ಮುಟ್ಟಿಸಿಕೊಂಡಿದ್ದ ಚೀನಾ ಉನ್ನತ ಮಟ್ಟದ ಕಮಾಂಡರ್ ಲೆವೆಲ್ ಮಾತುಕತೆ ನಡೆಸಿತ್ತು. ಅದೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಇದೀಗ ರಕ್ಷಣಾ ಸಚಿವರ ಮಟ್ಟದಲ್ಲಿ ಮಾತುಕತೆ ನಡೆದಿದೆ. ಇಂದು ಮಾಸ್ಕೋದಲ್ಲಿ ಎರಡು ಗಂಟೆಗಳ ಕಾಲ ಭಾರತ ಮತ್ತು ಚೀನಾ ರಕ್ಷಣಾ ಸಚಿವರು ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.