ಶಾಂಘೈ(ಬೀಜಿಂಗ್): ಇಡೀ ಜಗತ್ತಿಗೆ ಕಂಟಕಪ್ರಾಯವಾದ ಕೋವಿಡ್ 19 ಸೋಂಕಿನ ಉಗಮಸ್ಥಾನವಾಗಿದ್ದ ಚೀನಾದ ವುಹಾನ್ ಕುರಿತು ವರದಿ ಮಾಡಿದ್ದ ನಾಗರಿಕ ಪತ್ರಕರ್ತೆಗೆ (ಸಿಟಿಜನ್ ಜರ್ನಲಿಸ್ಟ್) ಚೀನಾ ನ್ಯಾಯಾಲಯ ಸೋಮವಾರ(ಡಿಸೆಂಬರ್ 28, 2020) ನಾಲ್ಕು ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಚೀನಾದ ವುಹಾನ್ ನಗರಿಯಲ್ಲಿ ಸುಮಾರು ಒಂದು ವರ್ಷದ ಹಿಂದೆ ಪತ್ತೆಯಾದ ಅಪರಿಚಿತ ಸೋಂಕಿನ ವಿವರಗಳು ಬಹಿರಂಗವಾದ ಬಳಿಕ ಸಿಟಿಜನ್ ಜರ್ನಲಿಸ್ಟ್ ಗೆ ಕೋರ್ಟ್ ಶಿಕ್ಷೆ ವಿಧಿಸಿರುವುದಾಗಿ ಪತ್ರಕರ್ತೆ ಪರ ವಕೀಲರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸೋಂಕು ಆರಂಭದ ಹಂತದಲ್ಲಿರುವಾಗಲೇ ವರದಿ ಮಾಡುವ ಮೂಲಕ ಸಮಸ್ಯೆಯನ್ನು ಉಲ್ಬಣಗೊಳಿಸಲು ಕಾರಣ ಎಂದು ಆರೋಪಿಸಲಾಗಿದ್ದು, ಈ ಕುರಿತು ಶಾಂಘೈ ಕೋರ್ಟ್ ದೀರ್ಘ ವಿಚಾರಣೆ ನಡೆಸಿದ ನಂತರ ಶಿಕ್ಷೆ ವಿಧಿಸಿರುವುದಾಗಿ ವರದಿ ವಿವರಿಸಿದೆ.
37ವರ್ಷದ ನಾಗರಿಕ ಪತ್ರಕರ್ತೆ ಝಾಂಗ್ ಝಾನ್ ಗೆ ಶಾಂಘೈನ ಜಿಲ್ಲಾ ಕೋರ್ಟ್ ಶಿಕ್ಷೆ ವಿಧಿಸಿದ್ದು, ನಾವು ಈ ಬಗ್ಗೆ ಮೇಲ್ಮನವಿ ಸಲ್ಲಿಸುವುದಾಗಿ ವಕೀಲ ರೆನ್ ಖ್ವಾನಿಯು ತಿಳಿಸಿದ್ದಾರೆ.
ಝಾಂಗ್ ಫೆಬ್ರುವರಿ ತಿಂಗಳಿನಲ್ಲಿ ಕೋವಿಡ್ ಸೋಂಕಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಲೈವ್ ವರದಿ ಮಾಡಿದ್ದು, ಇದು ಚೀನಾ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ಕೋವಿಡ್ ಸೋಂಕಿನ ಕುರಿತು ಟೀಕಿಸಿದ್ದ ಸುಮಾರು ಎಂಟು ಮಂದಿಯನ್ನು ಚೀನಾ ಸರ್ಕಾರ ಈಗಾಗಲೇ ಶಿಕ್ಷಿಸಿರುವುದಾಗಿ ವರದಿ ತಿಳಿಸಿದೆ.
ಝಾಂಗ್ ಬಂಧನವಾದ ನಂತರ ಸುಮಾರು ಕಳೆದ ಏಳು ತಿಂಗಳಿನಿಂದ ವಿಚಾರಣೆ ನಡೆಯುತ್ತಿದ್ದು, ಇಂದು ಕೋರ್ಟ್ ಹೊರಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಚಾರಣೆ ವೇಳೆ ವಿದೇಶಿ ಪತ್ರಕರ್ತರಿಗೆ ಕೋರ್ಟ್ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು ಎಂದು ವರದಿ ವಿವರಿಸಿದೆ.