ನವದೆಹಲಿ: ಲಡಾಖ್ ನ ಪ್ಯಾಂಗಾಂಗ್ ಸರೋವರ ಸಮೀಪದ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾ ಸೇನೆ ಪ್ರಚೋದನಕಾರಿ ಮಿಲಿಟರಿ ಕಾರ್ಯಾಚರಣೆಯ ಸಿದ್ಧತೆ ನಡೆಸಿತ್ತು. ವಾಸ್ತವ ಗಡಿ ರೇಖೆ ವಿಚಾರದಲ್ಲಿ ಉಭಯ ದೇಶಗಳು ಒಮ್ಮತದ ಮಾತುಕತೆ ಮೂಲಕ ವಿವಾದ ಇತ್ಯರ್ಥಗೊಳಿಸಲು ಮುಂದಾಗಿದ್ದವು. ಆದರೆ ಕೆಲವು ಪ್ರದೇಶಗಳಲ್ಲಿನ ಮಿಲಿಟರಿ ಉಪಸ್ಥಿತಿಯನ್ನು ಹಿಂಪಡೆಯಲು ಭಾರತ ಮತ್ತು ಚೀನ ನಡುವೆ ಕಳೆದ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿದ್ದರು ಕೂಡಾ ಯಾವುದೇ ಅಂತಿಮ ಫಲಿತಾಂಶ ಸಿಕ್ಕಿರಲಿಲ್ಲವಾಗಿತ್ತು.
ಶನಿವಾರ ರಾತ್ರಿ ಭಾರೀ ಸಂಖ್ಯೆಯಲ್ಲಿ ಬಂದಿದ್ದ ಚೀನ ಸೈನಿಕರು ಪ್ಯಾಂಗಾಂಗ್ ಸರೋವರದ ದಕ್ಷಿಣ ನದಿಪಾತ್ರದತ್ತ ಜಮಾಯಿಸಿರುವುದಾಗಿ ಮೂಲಗಳು ತಿಳಿಸಿವೆ. ಇಡೀ ರಾತ್ರಿ ಚೀನ ಸೇನೆ ಆಯಕಟ್ಟಿನ ಸ್ಥಳಗಳಿಗೆ ತೆರಳುತ್ತಿದ್ದು, ಅವರು ಪ್ಯಾಂಗಾಂಗ್ ಪ್ರದೇಶವನ್ನು ಕಬಳಿಸಲು ಎಲ್ಲಾ ರೀತಿಯಿಂದಲೂ ಸಿದ್ಧರಾಗಿ ಬಂದಿರುವುದಾಗಿ ವರದಿ ಹೇಳಿದೆ.
ಭಾರೀ ದೊಡ್ಡ ಸಂಖ್ಯೆಯಲ್ಲಿಯೇ ಚೀನಾ ಸೇನೆ ಪ್ಯಾಂಗಾಂಗ್ ಪ್ರದೇಶಕ್ಕೆ ಲಗ್ಗೆ ಇಟ್ಟಿತ್ತು. ಆದರೆ ಚೀನ ಸೇನೆಯ ಚಲವಲನದ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದ ಭಾರತೀಯ ಸೈನಿಕರು, ಚೀನಾ ಸೈನಿಕರು ತೆರಳುವ ಮಾರ್ಗವನ್ನು ಬಂದ ಮಾಡಿ ಇಟ್ಟಿದ್ದರು. ಸದ್ಯದ ಸ್ಥಿತಿಯಲ್ಲಿ ಯಾವುದೇ ದೈಹಿಕ ಹಲ್ಲೆ ನಡೆಸಿದ ಘಟನೆ ನಡೆದಿಲ್ಲ.
ಪ್ಯಾಂಗಾಂಗ್ ಸರೋವರ ಪ್ರದೇಶದ ಫಿಂಗರ್ಸ್ ಪ್ರದೇಶದ ವಿಚಾರದಲ್ಲಿ ಭಾರತ ಮತ್ತು ಚೀನ ಸೇನೆ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿತ್ತು. ಲಡಾಖ್ ನ ಪ್ಯಾಂಗಾಂಗ್ ಪ್ರದೇಶ, ಹಾಟ್ ಸ್ಪ್ರಿಂಗ್ , ಗಾಲ್ವಾನ್ ಕಣಿವೆ ಮತ್ತು ಡೇಪಾಸಾಂಗ್ ಪ್ರದೇಶದಲ್ಲಿ ನಿಯೋಜಿಸಿದ್ದ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು ಕೂಡಾ ಚೀನ ಅದನ್ನು ನಿರ್ಲಕ್ಷಿಸಿತ್ತು. ಅಲ್ಲದೇ ಭಾರತ ಕೂಡಾ ಗಡಿಯಲ್ಲಿ ಪೂರ್ಣಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸುವ ಮೂಲಕ ನಾವು ತಕ್ಕ ಪ್ರತ್ಯುತ್ತರ ಕೊಡಲು ಸಿದ್ಧ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿತ್ತು.
ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಿಂದ ಸೇನೆಯನ್ನು ಹಿಂಪಡೆಯಲು ಚೀನ ನಿರಾಕರಿಸುತ್ತಲೇ ಬಂದಿದೆ. ಆದರೆ ಭಾರತ ಪೂರ್ವ ಲಡಾಖ್ ನ ಎಲ್ಲಾ ಆಯಕಟ್ಟಿನ ಸ್ಥಳದಲ್ಲಿಯೂ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಭಾರತ ಪ್ರತಿಪಾದಿಸುತ್ತಲೇ ಬಂದಿದೆ. ಭಾರತ ಮತ್ತು ಚೀನಾ ನಡುವಿನ 3,488 ಕಿಲೋ ಮೀಟರ್ ಉದ್ದದ ಎಲ್ ಎಸಿಯ ವಿವಾದ ಇದಾಗಿದೆ.