Advertisement
ಕೋವಿಡ್-19 ಜಾಗತಿಕ ಪಿಡುಗು ಆಗುವ ವಿಚಾರವನ್ನು ಚೀನ ಆರು ದಿನ ಸಾರ್ವಜನಿಕರಿಂದ ರಹಸ್ಯವಾಗಿಟ್ಟಿತ್ತು. ವೈರಸ್ ಹರಡುವಲ್ಲಿ ಈ ಆರು ದಿನಗಳೇ ನಿರ್ಣಾಯಕ ವಾಗಿದ್ದವು. ಒಂದು ವೇಳೆ ಚೀನ ಸರಕಾರ ಮೊದಲೇ ಎಚ್ಚರಿಸಿದ್ದರೆ ಜಗತ್ತು ಇಷ್ಟು ಸಂಕಷ್ಟಗಳನ್ನು ಎದುರಿಸುವ ಪ್ರಮೇಯ ಬರುತ್ತಿರಲಿಲ್ಲ ಎಂದು ದ ಅಸೋಸಿಯೇಟೆಡ್ ಪ್ರಸ್ ವರದಿ ಮಾಡಿದೆ.
Related Articles
Advertisement
ಚೀನ ಸಾಕಷ್ಟು ಮುಂಚಿತವಾಗಿ ವೈರಸ್ ಪ್ರಸರಣವನ್ನು ತಡೆಯಲು ಕ್ರಮ ಕೈಗೊಂಡಿದ್ದರೆ ಇರುವ ವೈದ್ಯಕೀಯ ಸೌಲಭ್ಯವೇ ಸಾಕಾಗುತ್ತಿತ್ತು. ವುಹಾನ್‌ನ ವೈದ್ಯಕೀಯ ಸೌಲಭ್ಯಗಳಿಂದಲೇ ಪರಿಸ್ಥಿತಿಯನ್ನು ನಿಯಂತ್ರಿಸಬಹುದಿತ್ತು ಎನ್ನುತ್ತಾರೆ ಕ್ಯಾಲಿಫೋರ್ನಿಯ ವಿವಿಯ ವೈರಾಣು ತಜ್ಞ ಝುವೊ ಫೆಂಗ್ ಝಂಗ್.
ಜನರು ಗಾಬರಿಯಾಗುವುದನ್ನು ತಡೆಯಲು ಚೀನ ಸರಕಾರ ಮಾಹಿತಿ ಬಹಿರಂಗಪಡಿಸಲು ತಡ ಮಾಡಿರಬಹುದು. ಆದರೆ ಇದಕ್ಕಾಗಿ ಇಡೀ ಜಗತ್ತು ಬೆಲೆ ತೆರಬೇಕಾಗಿ ಬಂದಿದೆ. ಜ.5ರಿಂದ 17ರ ನಡುವೆ ವುಹಾನ್ ಮಾತ್ರವಲ್ಲದೆ ಚೀನದ ಇತರೆಡೆಗಳಲ್ಲೂ ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗಿದ್ದರು. ಆದರೆ ಚೀನ ಸರಕಾರ ಸಾಮಾನ್ಯವಾದ ವೈರಲ್ ಜ್ವರವೆಂದೇ ಭಾವಿಸಿತ್ತು.
ಮಾಧ್ಯಮಗಳ ಮೇಲಿನ ಉಡದ ಹಿಡಿತ, ಮಾಹಿತಿ ಹಂಚುವಿಕೆಗೆ ಇರುವ ನಿರ್ಬಂಧಗಳು, ಅಧಿಕಾರಶಾಹಿಯ ಅಡಚಣೆಗಳು, ಕೆಟ್ಟ ಸುದ್ದಿಯನ್ನು ಹಂಚಲು ಇರುವ ಅಂಜಿಕೆ ಇತ್ಯಾದಿ ಕಾರಣಗಳಿಂದ ಚೀನ ಮೊದಲೇ ಎಚ್ಚರಿಕೆ ನೀಡಲು ವಿಫಲವಾಗಿರುವ ಸಾಧ್ಯತೆಗಳಿವೆ. “ಕೋವಿಡ್ ವದಂತಿ’ಗಳನ್ನು ಹರಡಿದ್ದಕ್ಕೆ 9 ವೈದ್ಯರನ್ನು ಜೈಲಿಗಟ್ಟಿದ ಸುದ್ದಿ ಜ.2ರಂದು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾದ ಬಳಿಕವಂತೂ ವೈದ್ಯಕೀಯ ಸಮುದಾಯ ಭೀತಿಯಿಂದ ನಡುಗಿತು.
ಜ.13ರಂದು ಚೀನದ ಹೊರಗಿನ ಮೊದಲ ಪ್ರಕರಣ ಥಾಯ್ಲೆಂಡ್‌ನಿಂದ ವರದಿಯಾಯಿತು. ಆ ಬಳಿಕವೇ ಚೀನ ಸರಕಾರಕ್ಕೆ ಪರಿಸ್ಥಿತಿ ಕೈ ಮೀರಿದೆ ಎಂದು ಅರಿವಾದದ್ದು. ಅನಂತರವೇ ಚೀನ ದೇಶಾದ್ಯಂತ ಟೆಸ್ಟ್ ಕಿಟ್‌ಗಳನ್ನು ವಿತರಿಸಲು ತೊಡಗಿದ್ದಲ್ಲದೇ, ಆರೋಗ್ಯಾಧಿಕಾರಿಗಳಿಗೆ ಶಂಕಿತರನ್ನು ಪರೀಕ್ಷಿಸಲು ಆದೇಶಿಸಿತು. ವೈರಸ್ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕ್ಸಿ ಜಿನ್‌ಪಿಂಗ್ ಬಹಿರಂಗ ಹೇಳಿಕೆ ನೀಡಿದ್ದೇ ಜ.20ರಂದು. ಒಂದು ವೇಳೆ ಒಂದು ವಾರದ ಮೊದಲೇ ಜನರಿಗೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು, ಪ್ರಯಾಣ ನಿರ್ಬಂಧ ಇತ್ಯಾದಿ ಮುನ್ನೆಚ್ಚರಿಕೆಗಳನ್ನು ನೀಡಿದ್ದರೆ ಚೀನವೂ ಕೋವಿಡ್‌ನ ದೊಡ್ಡ ಹೊಡೆತದಿಂದ ಪಾರಾಗುತ್ತಿತ್ತು.