ಬೀಜಿಂಗ್: ಅಲಿಬಾಬಾ ಗ್ರೂಪ್‌ನ ಸ್ಥಾಪಕ, ಚೀನಾದ ಕೋಟ್ಯಧಿಪತಿ ಉದ್ಯಮಿ ಜಾಕ್ ಮಾ ಎಲ್ಲಿದ್ದಾರೆ? ಇಂಥದ್ದೊಂದು ಪ್ರಶ್ನೆ ಈಗ ಎಲ್ಲರನ್ನೂ ಕಾಡತೊಡಗಿದೆ. ಚೀನಾ ಸರ್ಕಾರದ ಕಣ್ಗಾವಲಿನಲ್ಲಿದ್ದ ಜಾಕ್ ಮಾ ಅವರು ಅಚ್ಚರಿಯೆಂಬಂತೆ ಕಳೆದೆರಡು ತಿಂಗಳಿಂದ ನಾಪತ್ತೆಯಾಗಿದ್ದಾರೆ. ನವೆಂಬರ್ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಯಾವ ಸುಳಿವೂ ಸಿಗುತ್ತಿಲ್ಲ.
ಇತ್ತೀಚೆಗೆ ಆಫ್ರಿಕಾಸ್ ಬ್ಯುಸಿನೆಸ್ ಹೀರೋಸ್ ಟ್ಯಾಲೆಂಟ್ ಶೋನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳಬೇಕಿದ್ದ ಅವರು, ಅಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ವಿಶೇಷವೆಂದರೆ, ಈ ಕಾರ್ಯಕ್ರಮದ ವೆಬ್‌ಸೈಟ್‌ನಿಂದಲೂ ಅವರ ಫೋಟೋ ತೆಗೆದು ಹಾಕಲಾಗಿತ್ತು. ಒಟ್ಟಿನಲ್ಲಿ ಜಾಕ್ ನಿಗೂಢವಾಗಿ ಕಣ್ಮರೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜಾಕ್ ವರ್ಸಸ್ ಚೀನಾ: ಜಾಕ್ ಮಾ ಮತ್ತು ಚೀನಾ ಆಡಳಿತದ ನಡುವೆ ಹಗ್ಗಜಗ್ಗಾಟ ಶುರುವಾಗಿದ್ದು 2020ರ ಅಕ್ಟೋಬರ್‌ನಲ್ಲಿ. ಶಾಂಘೈನ ಕಾರ್ಯಕ್ರಮದಲ್ಲಿ ಜಾಕ್ ಅವರು ಚೀನಾ ಸರ್ಕಾರ, ಅದರ ನಿಯಂತ್ರಣ ಸಂಸ್ಥೆಗಳು, ಬ್ಯಾಂಕುಗಳ ವಿರುದ್ಧ ಹರಿಹಾಯ್ದಿದ್ದರು. ಚೀನಾದ ಬ್ಯಾಂಕುಗಳನ್ನು ಗಿರವಿ ಅಂಗಡಿಗಳಿಗೆ ಹೋಲಿಸಿದ್ದರು. ಇದರ ಬೆನ್ನಲ್ಲೇ ಅವರ ಆ್ಯಂಟ್ ಗ್ರೂಪ್‌ನ 2.70 ಲಕ್ಷ ಕೋಟಿ ರೂ. ಮೌಲ್ಯದ ಸಾರ್ವಜನಿಕ ಷೇರು ಬಿಡುಗಡೆ(ಐಪಿಒ)ಯನ್ನೇ ಚೀನಾದ ಅಧಿಕಾರಿಗಳು ತಡೆಹಿಡಿದಿದ್ದರು. ಡಿಸೆಂಬರ್‌ನಲ್ಲಿ ಜಾಕ್ 80,300 ಕೋಟಿ ರೂ. ಕಳೆದುಕೊಂಡರು.
ಅಲಿಬಾಬಾ ಮಾರುಕಟ್ಟೆ ಮೌಲ್ಯ ಶೇ.17 ಪತನಗೊಂಡಿತು. ಅಲಿಬಾಬಾ “ಏಕಸ್ವಾಮ್ಯದ ಚಟುವಟಿಕೆ’ ನಡೆಸುತ್ತಿದೆ ಎಂಬ ಆರೋಪ ದಲ್ಲಿ ಜಾಕ್ ವಿರುದ್ಧ ತನಿಖೆಗೂ ಆದೇಶಿಸಲಾಯಿತು. ಒಂದಾದ ಮೇಲೆ ಒಂದರಂತೆ ಬಂದ ಸಂಕಷ್ಟಗಳು, ಚೀನಾ ಸರ್ಕಾರದ ದ್ವೇಷ ಸಾಧನೆಯ ನಡುವೆಯೇ ಜಾಕ್ ಮಾ ಕಣ್ಮರೆಯಾಗಿದ್ದಾರೆ ಎಂಬ ಅನುಮಾನಗಳು ಮೂಡಿವೆ.
ಕೊನೇ ಟ್ವೀಟ್
ಕಳೆದ ವರ್ಷದ ಅಕ್ಟೋಬರ್ 10ರಂದು ಜಾಕ್ ಮಾ, ಹವಾಮಾನ ವೈಪರೀತ್ಯದ ಸವಾಲು ಎದುರಿಸುವಂಥ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದರು. ಇದು ಅವರ ಕೊನೇ ಟ್ವೀಟ್ ಆಗಿದ್ದು, ನಂತರ ಅವರ ಖಾತೆಯಿಂದ ಯಾವುದೇ ಟ್ವೀಟ್ ಅಪ್ ಲೋಡ್ ಆಗಿಲ್ಲ. ಜಾಕ್ ಮಾ ನಾಪತ್ತೆ ಸುದ್ದಿ ಈಗ ಹೆಚ್ಚು ಸದ್ದು ಮಾಡಿದ್ದು, ಟ್ವಿಟರ್‌ನಲ್ಲಿ ಜಾಕ್ ಮಾ ಮತ್ತು ಅಲಿಬಾಬಾ ಹ್ಯಾಷ್ ಟ್ಯಾಗ್‌ಗಳು ಟ್ರೆಂಡಿಂಗ್ ಆಗಿವೆ.