ಹೊಸದಿಲ್ಲಿ: ಭಾರತ ಎಷ್ಟೇ ಸಂಯಮ ತೋರಿದರೂ ಚೀನ ಸೇನೆಯ ಉದ್ಧಟತನ ನಿಲ್ಲುತ್ತಿಲ್ಲ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ, ಇತ್ತೀಚೆಗೆ ಲಡಾಖ್‌ನ ಪೆನ್‌ಗಾಂಗ್ ಟಿಎಸ್‌ಒ ಸರೋವರ ಬಳಿ ಚೀನೀ ಸೈನಿಕರು ಭಾರತದ ಗಡಿಯೊಳಕ್ಕೆ ನುಗ್ಗಿದ ಸಂದರ್ಭ ಭಾರತೀಯ ಸೈನಿಕರ ಮೇಲೆ ಕಲ್ಲೆಸೆದ ವೀಡಿಯೋವೊಂದು ಈಗ ಬಿಡುಗಡೆಯಾಗಿದೆ.
ಇದನ್ನು ಸಿಎನ್‌ಎನ್-ನ್ಯೂಸ್18 ವಾಹಿನಿ ಬಿಡು ಗಡೆಗೊಳಿಸಿದೆ. ಆದರೆ ವೀಡಿಯೋದ ಸತ್ಯಾಸತ್ಯತೆ ಯನ್ನು ಅದು ಖಚಿತಪಡಿಸಿಲ್ಲ.
ಶುಕ್ರವಾರವಷ್ಟೇ ಲಡಾಖ್‌ನಲ್ಲಿ ಚೀನ- ಭಾರ ತೀಯ ಸೈನಿಕರ ಮಧ್ಯೆ ಘಟನೆಯೊಂದು ನಡೆದಿ ದ್ದಂತೂ ಹೌದು ಎಂದು ವಿದೇಶಾಂಗ ಇಲಾಖೆ ಒಪ್ಪಿ ಕೊಂಡಿತ್ತು. ಘಟನೆ ಬೆನ್ನಲ್ಲೇ ಎರಡೂ ದೇಶಗಳ ಸ್ಥಳೀಯ ಕಮಾಂಡರ್‌ಗಳು ಸಭೆ ಸೇರಿದ್ದಾಗಿ ಹೇಳಲಾಗಿತ್ತು.
ಆದರೆ ಕಲ್ಲೆಸೆತದ ಪ್ರಕರಣವನ್ನು ಹಾಗೂ ಚೀನ ಸೇನೆ ಭಾರತದ ಗಡಿಯೊಳಕ್ಕೆ ನುಗ್ಗಿದ್ದನ್ನು ಚೀನ ನಿರಾಕರಿಸಿತ್ತು. ನಮ್ಮ ಸೈನಿಕರು ಗಡಿಯಲ್ಲಿ ಶಾಂತಿಗೆ ಬದ್ಧವಾಗಿದ್ದಾರೆ ಎಂದು ವ್ಯತಿರಿಕ್ತ ಹೇಳಿಕೆ ನೀಡಿತ್ತು.
ಇತ್ತ ರವಿವಾರ ಪೂರ್ವ ಲಡಾಖ್ ಗಡಿಗೆ ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಭೇಟಿ ನೀಡಲಿದ್ದಾರೆ. ಚೀನ ಬೆಳವಣಿಗೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಪರಾಮರ್ಶಿಸಲಿದ್ದಾರೆ. ಈ ಸಂದರ್ಭ ಲೇಹ್‌ನ ವಾಯುಪಡೆ ಕಮಾಂಡರ್ ಕೂಡ ಹಾಜರಿರಲಿದ್ದಾರೆ.