ಕಲಬುರಗಿ : ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಚಿಂಚೋಳಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಚಿಂಚೋಳಿ ತಾಲ್ಲೂಕಿನ ಭೋಗಾಲಿಂಗದಳ್ಳಿ ತಾಂಡದ ಸಂಜು ಅಲಿಯಾಸ್ ಚಿನ್ನ ನಾಮದೇವ ರಾಠೋಡ್ ಎಂಬಾತನನ್ನು ಬಂಧಿಸಿ ಆತನಿಂದ ನಗದು 55 ಸಾವಿರ ರೂಪಾಯಿ ಮತ್ತು 92 ಸಾವಿರ ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಮಹಾಂತೇಶ ಪಾಟೀಲ್ ಪಿಎಸ್ ಐ ಮಂಜುನಾಥ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚಿಂಚೋಳಿ ಪಟ್ಟಣದಲ್ಲಿ ಹಾಡುಹಗಲೇ ಮನೆಯೊಂದರ ಮನೆಯ ಬಾಗಿಲು ಮುರಿದು ನಗದು ಹಣ ಮತ್ತು ಬೆಳ್ಳಿ ಬಂಗಾರ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು.
ಈ ಕುರಿತು ಕಲ್ಲಪ್ಪ ಶರಣಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಚಿಂಚೋಳಿ ಪೊಲೀಸರು. ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಿ ಇಂದು ರವಿವಾರ ಆರೋಪಿ ಸಂಜು ಚಿಂಚೋಳಿ ಬಸ್ ನಿಲ್ದಾಣ ಹತ್ತಿರ ಇದ್ದಾನೆಂದು ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ನಗದು ಮತ್ತು ಬೆಳ್ಳಿ ಬಂಗಾರ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಜುನಾಥ್ ರೆಡ್ಡಿ ಪಿಎಸ್ ಐ ತಿಳಿಸಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ