Advertisement

ಸಂತ್ರಸ್ತ ಕುಟುಂಬಕ್ಕೆ ಪುನರ್ವಸತಿ: ಡಿಸಿ ಶರತ್‌ ಭರವಸೆ

12:25 PM Dec 12, 2019 | Team Udayavani |

ಚಿಂಚೋಳಿ: ತಾಲೂಕಿನ ಯಾಕಾಪುರ ಗ್ರಾಮದಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆಯಾದ ಬಾಲಕಿಯ ಸಂತ್ರಸ್ತ ಕುಟುಂಬಕ್ಕೆ ಸಂತಾಪ ಹೇಳಿದರೆ ಸಾಲದು. ಅವರಿಗೆ ಸರ್ಕಾರದಿಂದ ಪರಿಹಾರ ಮತ್ತು ಪುನರ್ವಸತಿಗಾಗಿ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿ.  ಶರತ್‌ ಭರವಸೆ ನೀಡಿದರು.

Advertisement

ಯಾಕಾಪುರ ಗ್ರಾಮದ ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಯನ್ನು ಈಗಾಗಲೇ ಎಸ್ಪಿ ಬಂಧಿಸಿದ್ದಾರೆ. ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ನೀಡಿ, ಆದಷ್ಟು ಬೇಗನೆ ಆರೋಪಿಗೆ ಶಿಕ್ಷೆ ವಿಧಿಸಲಾಗುವುದು ಎಂದರು.

ಪ್ರಕರಣದ ಬಗ್ಗೆ ಎಸ್ಪಿಯಿಂದ ಮಾಹಿತಿ ಪಡೆದು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡುವುದಕ್ಕಾಗಿ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಗಮನಕ್ಕೆ ತರಲಾಗಿದೆ.

ಕಲಬುರಗಿಯಲ್ಲಿ ಉಪ ಮುಖ್ಯಮಂತ್ರಿಗಳ ಕೆಡಿಪಿ ಸಭೆ ಇರುವುದರಿಂದ ಪ್ರಕರಣವನ್ನು ಅವರ ಗಮನಕ್ಕೆ ತರುತ್ತೇನೆ. ಅಲ್ಲದೇ ಗ್ರಾಮಕ್ಕೂ ಭೇಟಿ ನೀಡುವಂತೆ ತಿಳಿಸಲಾಗುವುದು ಎಂದು ಹೇಳಿದರು.

ಮುಸ್ಲಿಂ ಸಮಾಜದ ಮುಖಂಡರಾದ ಕೆ.ಎಂ. ಬಾರಿ, ಅಬ್ದುಲ್‌ ಬಾಸೀತ ಮಾತನಾಡಿ, ಸಂತ್ರಸ್ತೆ ಕುಟುಂಬದ ಉಪಜೀವನ ತುಂಬಾ ಕಷ್ಟವಾಗಿದೆ. ತುಂಬ ಬಡತನದಿಂದ ಕೂಡಿದೆ. ಕೂಲಿ ಕೆಲಸ ಮಾಡಿ ಬದುಕುತ್ತಿರುವುದರಿಂದ ಕುಟುಂಬಕ್ಕೆ ಗ್ರಾಮದಲ್ಲಿ ಜಮೀನು, 25ಲಕ್ಷ ರೂ. ಪರಿಹಾರ ಮತ್ತು ಸರಕಾರಿ ಉದ್ಯೋಗ ಕೊಡಿಸಬೇಕೆಂದು ಆಗ್ರಹಿಸಿ, ಮನವಿ ಪತ್ರ ಸಲ್ಲಿಸಿದರು.

Advertisement

ಅಕ್ರಮ ಮದ್ಯ ಮಾರಾಟ ಆಗದಂತೆ ಗ್ರಾ.ಪಂ ಮಟ್ಟದಲ್ಲಿ ಪಿಡಿಒ ಮತ್ತು ಕಾರ್ಯದರ್ಶಿಗಳು ತೀವ್ರ ನಿಗಾ ವಹಿಸಬೇಕು. ಈ ಬಗ್ಗೆ ನಾನು ಕೂಡ ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ಪತ್ರಬರೆದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ತಾ.ಪಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿಗಳು ತಾ.ಪಂ ಇಒ ಅನೀಲಕುಮಾರ ರಾಠೊಡಗೆ ಸೂಚಿಸಿದರು.

ಸಂತ್ರಸ್ತೆಯ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳಬೇಕು. ಶಿಕ್ಷಣ ಇಲಾಖೆಯಿಂದ ಸಿಗುವ ಪರಿಹಾರವನ್ನು ನೀಡಬೇಕೆಂದು ಬಿಇಒಗೆ ತಿಳಿಸಿದರು. ಶಿಕ್ಷಣ ಇಲಾಖೆಯಿಂದ ಮಕ್ಕಳ ಕಲ್ಯಾಣ ಕ್ಷೇಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಒಂದು ಲಕ್ಷ ರೂ. ಪರಿಹಾರ ಕೊಡಲಾಗುವುದು ಎಂದು ಬಿಇಒ ದತ್ತಪ್ಪ ತಳವಾರ ಜಿಲ್ಲಾ ಧಿಕಾರಿ ಗಮನಕ್ಕೆ ತಂದರು.

ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮುನಾವರ ದೌಲಾ, ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ಲತೀಫ್‌, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಬನ್ಸಿಲಾಲ್‌ ಪವಾರ, ತಾ.ಪಂ ಅಧಿಕಾರಿ ಅನೀಲಕುಮಾರ ರಾಠೊಡ, ಅಧ್ಯಕ್ಷೆ ರೇಣುಕಾ ಚವ್ಹಾಣ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಸಿಪಿಐ ವಿಜಯಮಹಾಂತೇಶ ಮಠಪತಿ, ತಾಲೂಕು ಅಲ್ಪಸಂಖ್ಯಾತರ ಕಲ್ಯಾಣಾಧಿ ಕಾರಿ ಶಾಂತವೀರ ಮಠಪತಿ, ಸಿಡಿಪಿಒ ಪರಿಮಳ, ಪುರಸಭೆ ಸದಸ್ಯ ಶಬ್ಬೀರ ಅಹೆಮದ್‌, ಮೊಮಿನ್‌, ಮಾಳಪ್ಪ ಪೂಜಾರಿ, ನಾಸೀರ ಹುಸೇನ, ಲಾಡ್ಲೆ ಪಟೇಲ್‌, ಶರೀಫ ಕೊಹಿರ್‌, ಮೋಹೀನ ಮೋಮಿನ, ಅಖೀಲ ಕೋಹಿರ ಇನ್ನಿತರರು ಇದ್ದರು.

ಚಿಂಚೋಳಿ ತಾಲೂಕಿನಲ್ಲಿ ಕಿರಾಣಿ ಅಂಗಡಿ ಮತ್ತು ಚಹಾ ಹೋಟೆಲ್‌ ಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕೆಲವು ಮದ್ಯ ವ್ಯಾಪಾರಿಗಳು ಗ್ರಾಮಗಳಿಗೆ ಹೋಗಿ ಮದ್ಯದ ಬಾಟಲಿಗಳನ್ನು ಕೊಡುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟದಿಂದ ಇಂತಹ ಘಟನೆಗಳು ನಡೆಯುತ್ತಿವೆ. ಗ್ರಾಮ ಮತ್ತು ತಾಂಡಾಗಳಲ್ಲಿ ತರಕಾರಿ, ಹಾಲು, ನೀರು ಸರಿಯಾಗಿ ಸಿಗುವುದಿಲ್ಲ. ಆದರೆ ಮದ್ಯ ಸಿಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಸಂತ್ರಸ್ತ ಕುಟುಂಬಕ್ಕೆ ಐದು ಎಕರೆ ಜಮೀನು, ಪರಿಹಾರ ನೀಡಬೇಕು. ಶರಣಪ್ಪ ತಳವಾರ,
ಬಿಜೆಪಿ ಜಿಲ್ಲಾ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next