Advertisement

ಕಂದಾಯ ಗ್ರಾಮಗಳಾಗಿ ತಾಂಡಾ ಪರಿವರ್ತನೆ: ಜಾಧವ

05:14 PM Dec 30, 2019 | Naveen |

ಚಿಂಚೋಳಿ: ಕಲಬುರಗಿ ಜಿಲ್ಲೆಯ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಹೊಸ ಕಾಯ್ದೆ ಜಾರಿಗೊಳಿಸಿದೆ. ಕೇವಲ 50 ಮನೆಗಳನ್ನು ಹೊಂದಿರುವ ಗೊಲ್ಲರ ಹಟ್ಟಿ, ಕ್ಯಾಂಪ್‌ ಗಳು ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಗಳು ಆಗಲಿವೆ ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ತಾಲೂಕಿನ ಕುಂಚಾವರಂ ಗಡಿಭಾಗದ ಒಂಟಿ ಗುಡುಸಿ ತಾಂಡಾದಲ್ಲಿ ಭೂ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಕಂದಾಯ ಗ್ರಾಮಗಳ ರಚನೆ ಕುರಿತು ಏರ್ಪಡಿಸಿದ್ದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಕೊಂಡು 2017 ಮಾರ್ಚ್‌ 23ರಂದು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ನಿರ್ಣಯ ಕೈಕೊಳ್ಳಲಾಗಿತ್ತು. ಅಂದು ಮಾಡಿದ ಕಾನೂನು ಈಗ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಕುಂಚಾವರಂ ಗಡಿಭಾಗ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇದರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಯೋಜನೆಗಳನ್ನು ತಂದು ಅಭಿವೃದ್ಧಿ ಪಡಿಸುತ್ತೇನೆ. ತಾಂಡಾದ ಜನರು ಮೂಢನಂಬಿಕೆಗಳನ್ನು ಬಿಟ್ಟು ಬಿಡಬೇಕು. ಎಲ್ಲರೂ ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.

ಕುಂಚಾವರಂ ವನ್ಯಜೀವಿಧಾಮ ಅರಣ್ಯ ಪ್ರದೇಶ ಆಗಿರುವುದರಿಂದ ಇಲ್ಲಿನ ಮರಗಳನ್ನು ಸಂರಕ್ಷಣೆ ಮಾಡುವುದು ತಾಂಡಾದ ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಯಾರು ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಬಾರದು ಎಂದು ಸೂಚಿಸಿದರು.ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್‌ ಮಾತನಾಡಿ, ರಾಜ್ಯದಲ್ಲಿರುವ 3,300 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಪ್ರಾಯೋಗಿಕವಾಗಿ ಯೋಜನೆಯನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ರೂಪಿಸಿದೆ. ಒಂಟಿ ಗುಡುಸಿ ತಾಂಡಾವನ್ನು ಮಾದರಿ ತಾಂಡಾವನ್ನಾಗಿ ಮಾಡಲು ಇದನ್ನು ಆಯ್ಕೆಗೊಳಿಸಲಾಗಿದೆ. ಈ ತಾಂಡಾದಲ್ಲಿ 310 ಮನೆಗಳಿವೆ. 1,220 ಜನಸಂಖ್ಯೆ ಹೊಂದಿದೆ. ಇದರ ಬಗ್ಗೆ ಭೂಮಾಪಕರು ಸಮೀಕ್ಷೆ ನಡೆಸಲಿದ್ದಾರೆ. ತಾಂಡಾದ ಜನರು ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.

ಒಂಟಿ ಗುಡುಸಿ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿಸಲು ತೆಗೆದುಕೊಳ್ಳುವ ಸಮಯ ಹಾಗೂ ಮಾನವ ಶಕ್ತಿ ಆಧರಿಸಿ ಕ್ರಮ ಕೈಕೊಳ್ಳಲಾಗುವುದು. ರಾಜ್ಯದ ಇತರೆ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಲು ಇದು ಪ್ರಾಯೋಗಿಕವಾಗಿದೆ. ಚಿಂಚೋಳಿ ಮತ್ತು ಶಿಕಾರಿಪುರ ತಾಲೂಕುಗಳನ್ನು ಸದ್ಯ ಆಯ್ಕೆಗೊಳಿಸಲಾಗಿದೆ. ರಾಜ್ಯದ 3,300 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದ ಹಕ್ಕು ಪತ್ರಗಳನ್ನು ವಿತರಿಸಲಾಗುವುದು. ನಿಗಮದಿಂದ ಕೇವಲ ಚರಂಡಿ, ಸಿಮೆಂಟ್‌ ರಸ್ತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಜನರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದರು.

Advertisement

ಜಿಲ್ಲಾ ಭೂ ದಾಖಲೆಗಳ ಉಪ-ನಿರ್ದೇಶಕ ಶಂಕರ, ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಮಾತನಾಡಿ, ಕಂದಾಯ ಗ್ರಾಮಗಳ ಕುರಿತು ತಾಂಡಾದ ಜನರಿಗೆ ಸರ್ಕಾರ ಯೋಜನೆ ಕುರಿತು ಮಾಹಿತಿ ನೀಡಿದರು. ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ,
ಎಇಇ ಗುರುರಾಜ ಜೋಶಿ, ಎಇಇ ಮಹಮ್ಮದ ಅಹೆಮದ ಹುಸೇನ, ಪ್ರಭುಲಿಂಗ ಬುಳ್ಳಾ, ಎಇ ಸುಭಾಶ ರಾಠೊಡ, ಸಂಜೀವ ಚವ್ಹಾಣ, ಪಿಡಿಒ ತುಕ್ಕಪ್ಪ,ಲಕ್ಷ್ಮಣ ಆವಂಟಿ, ಚಂದ್ರಶೆಟ್ಟಿ ಜಾಧವ, ಸುನೀಲ ಸಲಗರ, ಜಗದೀಶಸಿಂಗ್‌ ಠಾಕೂರ, ಶ್ರೀಮಂತ ಕಟ್ಟಿಮನಿ, ಅಶೋಕ ಚವ್ಹಾಣ, ಎಇ ಕಲಿಮೋದ್ದೀನ್‌, ಗಿರಿರಾಜ ಸಜ್ಜನಶೆಟ್ಟಿ, ರಾಜು ರಾಠೊಡ, ವಿಜಯಕುಮಾರ ಜಾಧವ, ಪಿಎಸ್‌.ಐ ವಿಜಯಕುಮಾರ ರಾಠೊಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next