ಚಿಂಚೋಳಿ: ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಮಾರ್ಚ್ ಅಂತ್ಯದ ವರೆಗೆ ತೆರವುಗೊಳಿಸಲಾಗುವುದು. ಸಾರ್ವಜನಿಕರು ಇದಕ್ಕೆ ಸಂಬಂಧಿ ಸಿದ ದಾಖಲೆಗಳೊಂದಿಗೆ ಫೆ.8ರೊಳಗೆ ಲಿಖೀತ ಅರ್ಜಿ ಸಲ್ಲಿಸಬಹುದು ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದರು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ಸುಪ್ರಿಂಕೋರ್ಟ್ ಆದೇಶದಂತೆ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಆದೇಶ ಹೊರಡಿಸಲಾಗಿದೆ. ಹೀಗಾಗಿ ಸಾರ್ವಜನಿಕ ಸ್ಥಳ ಮತ್ತು ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಅನಧಿಕೃತ ದೇವಸ್ಥಾನ, ಚರ್ಚ್, ಗುರುದ್ವಾರ, ದರ್ಗಾ ತೆರವುಗೊಳಿಸಲಾಗುವುದು ಅನಿವಾರ್ಯವಾಗಿದೆ.
ತಾಲೂಕಿನಲ್ಲಿ 12 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿ ಕಾರಿ ಅಭಯಕುಮಾರ ಮಾತನಾಡಿ, ಪಟ್ಟಣದ ಹಾರಕೂಡ ಶಾಲೆ ಹತ್ತಿರವಿರುವ ಕಟ್ಟೆ ಬಸವಣ್ಣ, ಆಶ್ರಯ ಖಾನಾ, ಆಶ್ರಯ ಕಾಲೋನಿಯ ಹನುಮಾನ ದೇವಾಲಯ, ಬೀಜೋತ್ಪಾದನಾ ಕೇಂದ್ರದ ಬಳಿಯ ಬಕ್ಕಮ್ಮ ದೇವಾಲಯ, ಪೊಲೀಸ್ ಕ್ವಾಟರ್ಸ್‌ನ ಹನುಮಾನ ದೇವಾಲಯ, ಕೆಇಬಿ ಹನುಮಾನ ದೇವಾಲಯ, ತರಕಾರಿ ಮಾರುಕಟ್ಟೆ ಹತ್ತಿರದ ಹನುಮಾನ ಮೂರ್ತಿ, ಪೊಲೀಸ್ ಠಾಣೆಯಲ್ಲಿ ಇರುವ ಪೋತರಾಜ ಮೂರ್ತಿ, ಹೊಸ ನಗರ ಹನುಮಾನ ಮೂರ್ತಿ, ಭೋಗಾಲಿಂಗದಳ್ಳಿ ರಸ್ತೆ ಬಳಿಯ ಮಹೆಬೂಬ ಸುಬಾನಿ ದರ್ಗಾ ಹಾಗೂ ಚಿಂಚೋಳಿ ತಾಂಡೂರ ರಾಜ್ಯ ಹೆದ್ದಾರಿಯಲ್ಲಿ ಇರುವ ಯಲ್ಲಮ್ಮದೇವಿ ದೇವಸ್ಥಾನಗಳನ್ನು ಅನ ಧಿಕೃತವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಗೋಪಾಲರಾವ್ ಕಟ್ಟಿಮನಿ, ಮಾಣಿಕಪ್ಪ ಭಗವಂತಿ, ಕೆ.ಎಂ. ಬಾರಿ, ಅಬ್ದುಲ್ ಬಾಸೀತ,ನಿಯಾಜ ಅಲಿ, ಗೌತಮ ಬೊಮ್ಮನಳ್ಳಿ, ಮತೀನ ಸೌದಾಗರ, ಗಿರಿರಾಜ ನಾಟಿಕಾರ ಮಾತನಾಡಿ, ಪುರಸಭೆ ವತಿಯಿಂದ ಗುರುತಿಸಿದ ಅನಧಿಕೃತ ಸ್ಥಳಗಳಲ್ಲಿ ನಿರ್ಮಿಸಿದ ದೇವಸ್ಥಾನಗಳನ್ನು ಅನೇಕ ವರ್ಷಗಳ ಹಿಂದೆ ಕಟ್ಟಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲ. ಎಲ್ಲ ಕಟ್ಟಡಗಳು ಯಥಾಸ್ಥಿತಿಯಲ್ಲಿರಬೇಕು. ಯಾವುದೇ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಮಾಡಬೇಡಿರಿ. ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಅಶಾಂತಿ ವಾತಾವರಣ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ ಕಟ್ಟಡ ಮತ್ತು ಧಾರ್ಮಿಕ ದೇವಸ್ಥಾನಗಳ ಬಗ್ಗೆ ದಾಖಲೆಗಳಿದ್ದರೆ ಅವುಗಳನ್ನು ಫೆ. 8ರೊಳಗೆ ಸಲ್ಲಿಸಬೇಕು ಎಂದು ಹೇಳಿದರು.
ಎಇಇ ಗುರುರಾಜ ಜೋಶಿ, ಅಮೃತರಾವ್ ದರವೇಶ, ಭೀಮರಾವ್ ಮರಾಠ, ಪುರಸಭೆ ಸದಸ್ಯರಾದ ಬಸವರಾಜ ಶಿರಸಿ, ಜಗನ್ನಾಥ ಗುತ್ತೆದಾರ, ಶೇಷಾದ್ರಿ ಕಳಸ್ಕರ, ಡಾ| ಎಚ್. ಎಸ್. ಶಿವಪುರೆ, ಮಲ್ಲಿಕಾರ್ಜುನ ಪಾಂಚಾಳ, ಮನೋಹರ ಮೆಕ್ಯಾನಿಕ್, ನಾಗೇಂದ್ರ ಗುರಂಪಳ್ಳಿ, ಜಗದೀಶ್ವರ ಟೈಪಿಸ್ಟ್, ಅನವರ ಖತೀಬ, ಬಸವಣ್ಣ ಪಾಟೀಲ, ಶಿವಕುಮಾರ ಪೋಚಾಲಿ, ಲಕ್ಷ್ಮೀಕಾಂತ ಜಾಬಶೆಟ್ಟಿ, ಹಣಮಂತ ಪೂಜಾರಿ, ಉಮಾ ಪಾಟೀಲ ಇನ್ನಿತರರಿದ್ದರು. ಶಿರಸ್ತೇದಾರ ವೆಂಕಟೇಶ ದುಗ್ಗನ್ ಸ್ವಾಗತಿಸಿದರು, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ವಂದಿಸಿದರು.