Advertisement
ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಯಿಂದ ಪಟೇಲ್ ಕಾಲೋನಿ, ಬೆಳ್ಳಿಬೆಳಕು ಕಾಲೋನಿ, ಆಶ್ರಯ ಕಾಲೋನಿಯ 70ಮನೆಗಳಿಗೆ ಚರಂಡಿ ನೀರು ನುಗ್ಗಿದ್ದರಿಂದ ಮಲಗಿದ್ದ ಜನರು ಎಚ್ಚರವಾಗಿದ್ದು, ಚಿಕ್ಕಮಕ್ಕಳನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳಿದರು. ಮನೆಯಲ್ಲಿದ್ದ ದಿನಬಳಕೆ ಆಹಾರ ಧಾನ್ಯ, ಬಟ್ಟೆಬರೆ, ಇನ್ನಿತರ ವಸ್ತುಗಳು ನೀರಿನಿಂದ ಹಾನಿಯಾಗಿವೆ.
Related Articles
Advertisement
ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ಹರಿದುಬಿಟ್ಟ ಹೆಚ್ಚುವರಿ ನೀರಿನಿಂದ ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡಹನಳ್ಳಿ, ನಿಮಾಹೊಸಳ್ಳಿ,ಪೋಲಕಪಳ್ಳಿ, ಗರಗಪಳ್ಳಿ ಗ್ರಾಮದ ಬಳಿ ಮುಲ್ಲಾಮಾರಿ ನದಿಗೆ ನಿರ್ಮಿಸಿದ ಬ್ಯಾರೇಜ್ ಜಲಾವೃತವಾಗಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ, ಗ್ರಾಮಸ್ಥರು ಹೊಲಗದ್ದೆಗಳಿಗೆ ಮತ್ತು ಬೇರೆಡೆ ಹೋಗಲು ತೊಂದರೆಪಡಬೇಕಾಯಿತು.
ಪಟ್ಟಣದ ಪಟೇಲ್ ಕಾಲೋನಿ ಬಳಿ ಇರುವ ಎಸ್.ಬಿ.ಐ ಬ್ಯಾಂಕಿನ ನೆಲಮಹಡಿಯಲ್ಲಿ ಮಳೆ ನೀರು ನಿಂತಿದ್ದರಿಂದ ಬರುವ ಗ್ರಾಹಕರು ತೊಂದರೆ ಪಡುವಂತೆ ಆಗಿತ್ತು. ಬ್ಯಾಂಕಿನ ಹಿಂದುಗಡೆ ಇರುವ ಮನೆಗಳ ಸುತ್ತಮುತ್ತ ತಗ್ಗುಪ್ರದೇಶದಲ್ಲಿ ಮಳೆ ನೀರು ನಿಂತಿದೆ. ಆದರೆ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಮಳೆ ನೀರು ಹರಿದು ಹೋಗುತ್ತಿಲ್ಲ. ಮಳೆ ನೀರಿನಿಂದ ಸೊಳ್ಳೆಕಾಟ, ಗೊಬ್ಬುವಾಸನೆ ವಿಪರೀತವಾಗಿದೆ ಎಂದು ನಿವಾಸಿಗಳು ದೂರಿದ್ದಾರೆ. ಕನಕಪುರ,ಗಾರಂಪಳ್ಳಿ, ಹೂಡದಳ್ಳಿ, ಮಿರಿಯಾಣ, ಮರಪಳ್ಳಿ, ಚಿಮ್ಮನಚೋಡ, ನರನಾಳ, ಚಿಂಚೋಳಿ ಗ್ರಾಮಗಳ ಹೊಲಗಳಲ್ಲಿ ಬೆಳೆದ ತೊಗರಿ ಮಳೆ ನೀರಲ್ಲಿ ನಿಂತಿದೆ. ಆಹಾರ ಧಾನ್ಯಕ್ಕೆ ಹಾನಿ: ಪಟ್ಟಣದ ಚಂದಾಪುರ ನಗರದ ಚರಂಡಿಗೆ ಹೊಂದಿಕೊಂಡಿರುವ ಪಟೇಲ್ ಕಾಲೋನಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಆಹಾರಧಾನ್ಯಗಳಿಗೆ ಹಾನಿಯಾಗಿದೆ. ಬೈಕ್ ಮತ್ತು ಕಾರುಗಳು ಕೊಚ್ಚಿಕೊಂಡು ಹೋಗಿವೆ ಎಂದು ಇಸ್ಮಾಯಿಲ್ ಪಟೇಲ ತಿಳಿಸಿದ್ದಾರೆ. ಕ್ರಮಕ್ಕೆ ಜೆಡಿಎಸ್ ಆಗ್ರಹ: ಪಟ್ಟಣದಲ್ಲಿ ಹೆಚ್ಚು ಮಳೆ ಸುರಿದ್ದರಿಂದ ಪಟೇಲ್, ಆಶ್ರಯ, ಬೆಳ್ಳಿ ಬೆಳಕು ಕಾಲೋನಿಯಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಕೂಡಲೇ ಈ ಪ್ರಸಂಗ ಮರುಕಳಿಸದಂತೆ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಆಗ್ರಹಿಸಿದ್ದಾರೆ.