ಚಿಂಚೋಳಿ: 71ನೇ ಗಣರಾಜ್ಯೋತ್ಸವ ದಿನಾಚರಣೆ ದಿವಸ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ತಾಲೂಕಾಡಳಿತ, ಪುರಸಭೆ ಮಾಲಾರ್ಪಣೆ ಮಾಡದೇ ಅಗೌರವ ತೋರಿಸಿದ್ದನ್ನು ಖಂಡಿಸಿ ತಾಲೂಕಿನ ವಿವಿಧ ದಲಿತ ವಿವಿಧ ಸಂಘಟನೆಗಳ ಮುಖಂಡರು, ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಪರೇಡ್ ಮೈದಾನದಲ್ಲಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.
ಶಾಸಕ ಡಾ| ಅವಿನಾಶ ಜಾಧವ, ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ ಎಂದು ಪುರಸಭೆ ಸದಸ್ಯ ಆನಂದ ಟೈಗರ್, ಹಿರಿಯ ದಲಿತ ಮುಖಂಡ ಗೋಪಾಲರಾವ್ ಕಟ್ಟಿಮನಿ, ಭಾರತ ಮುಕ್ತಿ ಮೋರ್ಚಾ ರಾಜ್ಯ ಸಂಚಾಲಕ ಮಾರುತಿ ಗಂಜಗಿರಿ, ಗೌತಮ ಬೊಮ್ಮನಳ್ಳಿ, ಶಿವಕುಮಾರ ಕೊಳ್ಳುರ, ದಲಿತ ಸಂಘಟನೆ ಮುಖಂಡ ವಾಮನರಾವ್ ಕೊರವಿ, ಪಾಂಡುರಂಗ ಲೊಡನೋರ, ಅಮರನಾಥ ಲೊಡನೋರ, ಲೋಕೇಶ, ವಿಶ್ವನಾಥ ಬೀರನಳ್ಳಿ ಹಾಗೂ ಮತ್ತಿತರು ತೀವ್ರವಾಗಿ ಖಂಡಿಸಿದರು.
ಈ ವೇಳೆ ಮಾತನಾಡಿದ ಶಾಸಕ ಡಾ| ಅವಿನಾಶ ಜಾಧವ, ಡಾ| ಬಿ.ಆರ್. ಅಂಬೇಡ್ಕರ್ ಅವರಿಗೆ ನಾವ್ಯಾರೂ ಅಗೌರವ ತೋರಿಸಿಲ್ಲ. ಯಾರು ತಪ್ಪು ಮಾಡಿದ್ದಾರೆಯೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ನಂತರ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ನಿಮಗೆ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಬೇಕು. ಪೂಜೆ ಸಲ್ಲಿಸಬೇಕು ಎಂದು ಗೊತ್ತಾಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಅಭಯಕುಮಾರ ಮಾತನಾಡಿ, ಇನ್ನು ಮುಂದೆ ಇಂತಹ ತಪ್ಪು ಆಗದಂತೆ
ನೋಡಿಕೊಳ್ಳುತ್ತೇನೆ. ನನ್ನನ್ನು ಕ್ಷಮಿಸಿ ಎಂದು ಬಹಿರಂಗವಾಗಿ ದಲಿತ ಸಂಘಟನೆಗಳ ಮುಖಂಡರಲ್ಲಿ ಕ್ಷಮೆಯಾಚಿಸಿದರು. ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರು ಕ್ಷಮೆ ಕೋರಿದರು.
ಕೇವಲ ಕ್ಷಮೆ ಕೇಳಿದರೆ ಸಾಲದು ತಪ್ಪು ಮಾಡಿದ ಮುಖ್ಯಾಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಪಟ್ಟುಹಿಡಿದ ದಲಿತ ಸಂಘಟನೆಗಳ ಮುಖಂಡರಾದ ಜೆಡಿಎಸ್ ತಾಲೂಕು ಅಧ್ಯಕ್ಷ ರವಿಶಂಕರ ಮುತ್ತಂಗಿ, ಹಣಮಂತ ಪೂಜಾರಿ, ಮಹೆಬೂಬಶಾ, ಮಾಜೀದ್ ಪ್ರತಿಭಟನೆ ನಡೆಸಿದರು. ದಲಿತ ಸಂಘಟನೆಗಳ ಮುಖಂಡ ಕಾಶಿನಾಥ ದೇಗಲಮಡಿ ಶಾಸಕರ ಕಾರಿನ ಎದುರು ಮಲಗಿ ಪ್ರತಿಭಟನೆ ನಡೆಸುತ್ತಿದ್ದಾಗ ಡಿವೈಎಸ್ಪಿ ಇ.ಎಸ್. ವೀರಭದ್ರಯ್ಯ, ಸಿಪಿಐ ಎಚ್.ಎಂ. ಇಂಗಳೇಶ್ವರ ಮಾತನಾಡಿ, ಯಾರು ನಿರ್ಲಕ್ಷ್ಯತನ ಮತ್ತು ಅಗೌರವ ತೋರಿಸಿದ್ದಾರೆ ಅವರ ವಿರುದ್ಧ ದೂರು ನೀಡಿ ಎಂದು ಎಲ್ಲರನ್ನು ಸಮಾಧಾನಪಡಿಸಿ ಪ್ರಕ್ಷುಬ್ದ ವಾತಾವರಣವನ್ನು ತಿಳಿಗೊಳಿಸಿದರು.
ನಂತರ ಶಾಸಕ ಡಾ| ಅವಿನಾಶ ಜಾಧವ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರಳಿ ಡಾ|ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಿಜೆಪಿ ಕಾರ್ಯಕರ್ತರು, ಗಣ್ಯರು, ಅಧಿಕಾರಿಗಳು ಭಾಗವಹಿಸಿದ್ದರು. ಮುಖ್ಯಾಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ದೂರು ನೀಡಲಾಗಿದೆ ಎಂದು ಮಾರುತಿ ಗಂಜಗಿರಿ ಗೋಪಾಲರಾವ್ ಕಟ್ಟಿಮನಿ ತಿಳಿಸಿದ್ದಾರೆ.