ಚಿಂಚೋಳಿ: ತಾಲೂಕಿನ ರೈತರು ಕೃಷಿ ಇಲಾಖೆಯಿಂದ ಬೀಜೋಪಚಾರ ಮಾಡಿದ ಬಿತ್ತನೆ ಬೀಜ ಉಪಯೋಗಿಸಿದರೆ ಅಧಿಕ ಇಳುವರಿ ಪಡೆದುಕೊಳ್ಳಬಹುದಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಅನಿಲಕುಮಾರ ರಾಠೊಡ ರೈತರಿಗೆ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ಕೆಲವು ಕಡೆಗಳಲ್ಲಿ ಅಲ್ಪಸ್ವಲ್ಪ ಮಳೆ ಆಗಿರುವುದರಿಂದ ರೈತರು ಮುಂಗಾರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ತೊಗರಿ, ಉದ್ದು, ಹೆಸರು, ಸೋಯಾಬಿನ್ ಬೀಜ ಬಿತ್ತನೆ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಡೈಕ್ರೋಡ್ರಾಮ ಕೀಟನಾಶಕ ಪುಡಿಯನ್ನು ಉಪಯೋಗಿಸಿದರೆ ಮುಂದೆ ಬೆಳೆಗಳಿಗೆ ನೆಟೆ ರೋಗ ಬರುವುದಿಲ್ಲ. ಜೂ.6 ರಿಂದ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಏಕಕಾಲಕ್ಕೆ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ರೈತರು ಅಗತ್ಯ ದಾಖಲೆ ನೀಡಿ ಬೀಜ ಪಡೆದುಕೊಳ್ಳಬೇಕು ಎಂದು ಹೇಳಿದರು.
ಐನಾಪುರ, ಚಿಮ್ಮನಚೋಡ, ಕುಂಚಾವರಂ, ಸುಲೇಪೇಟ, ಕೋಡ್ಲಿ, ನಿಡಗುಂದಾ, ಚಿಂಚೋಳಿ ವಲಯಗಳಲ್ಲಿ ಅಲ್ಲಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದೆ. ಮೋಡ ಕವಿದ ತಂಪು ವಾತಾವರಣ ಇರುವುದರಿಂದ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದರು. ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಒಟ್ಟು 99,767 ಹೆಕ್ಟೇರ್ ಬಿತ್ತನೆ ಗುರಿ ಇದೆ. ಬಿತ್ತನೆ ಬೀಜಗಳ ಮತ್ತು ರಸಗೊಬ್ಬರ ಕೊರತೆ ಇಲ್ಲ ಎಂದರು.
ಬಿತ್ತನೆ ಕ್ಷೇತ್ರದ ವಿವರ: ಹೆಸರು12000 ಹೆಕ್ಟೇರ್, ಉದ್ದು 7000 ಹೆ., ತೊಗರಿ 69,500 ಹೆ., ಅವರೆ 25 ಹೆ., ಸೋಯಾಬಿನ್ 700 ಹೆ., ಹೈಬ್ರಿಡ್ ಜೋಳ 310 ಹೆ., ಸಜ್ಜೆ 1000 ಹೆ., ಮೆಕ್ಕೆಜೋಳ 200 ಹೆ., ಎಳ್ಳು 650 ಹೆ., ಹೈಬ್ರಿಡ್ ಹತ್ತಿ 150 ಹೆ., ಕಬ್ಬು 1487 ಹೆ., ಇತರೆ 15 ಹೆ. ಬಿತ್ತನೆ ಗುರಿ ಇದೆ. ದ್ವಿದಳ ಧಾನ್ಯ 22,222 ಹೆ., ಎಣ್ಣಿಕಾಳು ಬೆಳೆ 1926.25 ಹೆ. ಏಕದಳ ಧಾನ್ಯ 383.75 ಹೆ. ವಾಣಿಜ್ಯ ಬೆಳೆ 409.28 ಹೆ., ಬಿತ್ತನೆ ಬೀಜ ತೊಗರಿ 155 ಕ್ವಿಂಟಲ್, ಸೋಯಾಬಿನ್ 99.60 ಕ್ವಿಂಟಲ್ ಪೂರೈಕೆ ಆಗಿದೆ.
ರಸಗೊಬ್ಬರ: ಯೂರಿಯಾ 10 ಟನ್, ಡಿಎಪಿ2220 ಟನ್, ಎಂಒಪಿ 30 ಟನ್, ಕಾಂಪೋಸ್ಟ್ 50 ಟನ್ ಒಟ್ಟು 2315 ಮೆಟ್ರಿಕ್ ಟನ್ ಸಂಗ್ರಹವಿದೆ ಎಂದರು.