ಚಿಂಚೋಳಿ: ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಪಟ್ಟಣದ ಜನರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿ ಹೊರಗೆ ಬರುವುದನ್ನೇ ಮರೆತಿದ್ದಾರೆ.
ಸರ್ಕಾರದ ಆದೇಶದಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಕಿರಾಣಿ, ಹಾರ್ಡ್‌ವೇರ್, ಇಲೆಕ್ಟ್ರಿಕಲ್ ಶಾಪ್, ಬಟ್ಟೆ ಹಾಗೂ ಇನ್ನಿತರ ಅಂಗಡಿಗಳ ವ್ಯವಹಾರ ಆರಂಭಿಸುವಂತೆ ಸೂಚಿಸಿದೆ. ಅದರಂತೆ ಪಟ್ಟಣದ ಎಲ್ಲ ಅಂಗಡಿಗಳಲ್ಲೂ ವ್ಯಾಪಾರ-ವಹಿವಾಟು ಆರಂಭವಾಗಿವೆ.
ಆದರೆ, ಅಂಗಡಿಗಳ ಮಾಲೀಕರು ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ರೀತಿಯ ಗುರುತು ಹಾಕಿರುವುದು ಕಂಡುಬರುತ್ತಿಲ್ಲ. ಇದರಿಂದಾಗಿ ಗ್ರಾಹಕರು ಒಬ್ಬರಿಗೊಬ್ಬರ ಸಮೀಪದಲ್ಲೇ ನಿಂತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಅಲ್ಲದೇ ಅಂಗಡಿ ಮಾಲೀಕರಾಗಲಿ, ಗ್ರಾಹಕರಾಗಲಿ ಮಾಸ್ಕ್ ಧರಿಸಿ ವ್ಯವಹರಿಸುವುದು ಕಂಡುಬರುತ್ತಿಲ್ಲ.
ಜಿಲ್ಲಾಡಳಿತ ಕೆಲವು ವ್ಯಾಪಾರ-ವಹಿವಾಡಿಕೆ ಸಡಿಲಿಕೆ ನೀಡಿದ್ದರೂ ಕುರಿ, ಕೋಳಿ ಮಾಂಸ ಮಾರಾಟಕ್ಕೆ ಇನ್ನೂ ಅನುಮತಿ ನೀಡಿಲ್ಲ. ಆದರೂ ಇಲ್ಲಿನ ಬಸ್ ನಿಲ್ದಾಣ, ಸುತ್ತಮುತ್ತಲಿನ ಶೆಡ್ ಹಾಗೂ ಕೆಲವು ಮನೆಗಳಲ್ಲಿ ರಾಜಾರೋಷವಾಗಿ, ಹೆಚ್ಚಿನ ಬೆಲೆಯಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಆದರೆ ಕ್ರಮ ಕೈಗೊಳ್ಳಲು ಪುರಸಭೆ ಹಿಂದೇಟು ಹಾಕುತ್ತಿದೆ. ಚಿಂಚೋಳಿ ತಾಲೂಕಿನಲ್ಲಿ ಕೋವಿಡ್ -19 ಪ್ರಕರಣಗಳು ದಾಖಲಾಗಿಲ್ಲ. ಆದರೆ ಜನರ ಆರೋಗ್ಯ ತಕ್ಷಣೆಗಾಗಿ ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿವೆ. ಇವರೆಲ್ಲರ ಜತೆ ಪುರಸಭೆಯೂ ಕೈ ಜೋಡಿಸಬೇಕಾಗಿದೆ. ಜನರಲ್ಲಿ ಕೋವಿಡ್ ಸೋಂಕಿನ ಕುರಿತು ಮತ್ತಷ್ಟು ಜಾಗೃತಿ ಮೂಡಿಸಬೇಕಿದೆ.