ಚಿಂಚೋಳಿ: ತಾಲೂಕಿನಲ್ಲಿ ಕಳೆದ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಸಾಧಾರಣವಾಗಿ ಉತ್ತಮ ಮಳೆ ಆಗಿರುವುದರಿಂದ ಬಿಸಿಲಿನ ತಾಪದಿಂದ ಬಾಡಿ ಹೋಗುತ್ತಿದ್ದ ಮುಂಗಾರು ಬೆಳೆಗಳಿಗೆ ಜೀವ ಕಳೆ ಬಂದಿದ್ದು ರೈತರಲ್ಲಿ ಖುಷಿ ತಂದಿದೆ.
ಪ್ರಸಕ್ತ ಸಾಲಿನ ಜೂನ್ ತಿಂಗಳಲ್ಲಿ ಮಳೆ ಕೊರತೆ ಮಧ್ಯೆ ಹೆಸರು, ಉದ್ದು, ತೊಗರಿ, ಸೋಯಾಬಿನ್, ಅಲಸಂದಿ, ಸಜ್ಜೆ, ಹೈಬ್ರಿಡ್ ಜೋಳದ ಬೆಳೆಗಳು ಬೆಳೆಯದೇ ಮಳೆ ಅಭಾವದಿಂದಾಗಿ ಕುಂಠಿತವಾಗಿದ್ದವು. ಕಳೆದೆರಡು ದಿನಗಳಿಂದ ರಾತ್ರಿ ಮಳೆ ಸುರಿಯುತ್ತಿರುವುದರಿಂದ ಉದ್ದು, ಹೆಸರು, ತೊಗರಿ ಬೆಳೆಗಳಲ್ಲಿ ಚೇತರಿಕೆ ಕಂಡು ಬರುತ್ತಿದೆ.
ಮುಂಗಾರು ಬಿತ್ತನೆಗಾಗಿ ಹೆಸರು, ಉದ್ದು, ತೊಗರಿ ಬೀಜ ಹಾಗೂ ಡಿಎಪಿ, ಯೂರಿಯಾ ರಸಗೊಬ್ಬರವನ್ನು ಅಧಿಕ ಬೆಲೆಯಲ್ಲಿ ಖರೀದಿ ಮಾಡಿದ ರೈತರಲ್ಲಿ ಆತಂಕ ಸೃಷ್ಟಿಯಾಗಿತ್ತು. ಈಗ ಬೆಳೆಗಳಲ್ಲಿ ಸ್ವಲ್ಪಮಟ್ಟಿಗೆ ಬೆಳವಣಿಗೆ ಆಗುತ್ತಿರುವುದರಿಂದ ಶುಕ್ರವಾರ ಮತ್ತು ಶನಿವಾರ ಕೆಲವು ಗ್ರಾಮಗಳಲ್ಲಿ ಬೆಳೆಗಳಲ್ಲಿ ಹುಲ್ಲು ಕೀಳುವ ಕೆಲಸ ಭರದಿಂದ ನಡೆಯುತ್ತಿವೆ. ತಾಲೂಕಿನ ಸುಲೇಪೇಟ ಹೋಬಳಿ ಮತ್ತು ಕೋಡ್ಲಿ ಹೋಬಳಿಯಲ್ಲಿ ಉತ್ತಮ ಮಳೆ ಆಗಿರುವದರಿಂದ ಗಡಿಕೇಶ್ವಾರ, ಹಲಚೇರಾ, ಹೂಡೇಬೀರನಳ್ಳಿ, ಕುಪನೂರ, ತೇಗಲತಿಪ್ಪಿ, ಕೊರವಿ, ನಾವದಗಿ, ಕುಡಹಳ್ಳಿ ಗ್ರಾಮಗಳಲ್ಲಿ ಹೆಸರು, ಉದ್ದು, ತೊಗರಿ ಬೆಳೆಗಳು ಸಮೃದ್ದಿಯಾಗಿ ಬೆಳೆದಿರುವುದರಿಂದ ಬೆಳೆಗಳು ನಳನಳಿಸುತ್ತಿವೆ.
ಚಿಂಚೋಳಿ: 51ಮಿ.ಮೀ, ಐನಾಪುರ 25.6 ಮಿ.ಮೀ, ಕುಂಚಾವರಂ 15.2 ಮಿ.ಮೀ, ಸುಲೇಪೇಟ 7.8 ಮಿ.ಮೀ, ಚಿಮ್ಮನಚೋಡ 4.4 ಮಿ.ಮೀ, ನಿಡಗುಂದಾ 4.2 ಮಿ.ಮೀ ಮಳೆ ಆಗಿದೆ. ಕೊಳ್ಳೂರ, ಗಾರಂಪಳ್ಳಿ, ಶಾದೀಪುರ, ಐನೋಳಿ, ದೇಗಲಮಡಿ, ವೆಂಕಟಾಪುರ, ಗಡಿಲಿಂಗದಳ್ಳಿ, ಶಿರೋಳಿ ಗ್ರಾಮಗಳಲ್ಲಿ ಉತ್ತಮ ಮಳೆ ಆಗಿದೆ.