Advertisement

ಮಾರುಕಟ್ಟೆಯಿಲ್ಲದೇ ಹಾಳಾಗುತ್ತಿದೆ ಈರುಳ್ಳಿ-ಕಲ್ಲಂಗಡಿ

04:16 PM Apr 10, 2020 | Naveen |

ಚಿಂಚೋಳಿ: ಪ್ರಸಕ್ತ ಸಾಲಿನಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ, ಉಳ್ಳಾಗಡ್ಡಿ, ಪಪ್ಪಾಯಿ ಲಾಕ್‌ ಡೌನ್‌, 144ನೇ ಕಲಂ ಜಾರಿ ಹಿನ್ನೆಲೆಯಲ್ಲಿ ಮಾರುಕಟ್ಟೆ ಸೌಲಭ್ಯವಿಲ್ಲದೇ ಹಾಳಾಗುತ್ತಿದ್ದು, ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

Advertisement

ಬೇಸಿಗೆ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ಕಲ್ಲಂಗಡಿಯನ್ನು ತಾಲೂಕಿನ ಕುಂಚಾವರಂ, ದೇಗಲಮಡಿ, ಬಂಟನಳ್ಳಿ, ಸಾಲೇಬೀರನಳ್ಳಿ, ಚಿಂಚೋಳಿ, ಅಣವಾರ, ಪೋಲಕಪಳ್ಳಿ, ರಟಕಲ್‌, ದಸ್ತಾಪುರ ಇನ್ನಿತರ ಗ್ರಾಮಗಳಲ್ಲಿ ಒಟ್ಟು 500 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ. ಕೆಲವು ಗ್ರಾಮಗಳಲ್ಲಿ ಪ್ರತಿ ಕಲ್ಲಂಗಡಿ ಸುಮಾರು 5 ಕೆ.ಜಿಯಷ್ಟು ದಪ್ಪವಾಗಿ ಬೆಳೆದಿವೆ. ಆದರೆ ಮಾರುಕಟ್ಟೆಗೆ ಸೌಲಭ್ಯವಿಲ್ಲದೇ ರೈತರು ಪರದಾಡುವಂತೆ ಆಗಿದೆ. ಹೀಗಾಗಿ ಕಲ್ಲಂಗಡಿಯನ್ನು ಹೊಲದಲ್ಲಿಯೇ ಬಿಡಲಾಗಿದ್ದು, ಬಿಸಿಲಿನ ತಾಪಕ್ಕೆ ಕೊಳೆಯುತ್ತಿವೆ. ರಟಕಲ್‌, ದಸ್ತಾಪುರ, ಅಣವಾರ, ಚಿಂಚೋಳಿ, ದೇಗಲಮಡಿ, ಮುಕರಂಬಾ, ಕನಕಪುರ, ಚೆನ್ನೂರ, ಸುಲೇಪೇಟದಲ್ಲಿ ಸಾವಿರಾರು ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಉಳ್ಳಾಗಡ್ಡಿಯನ್ನು ಚೀಲಗಳಲ್ಲಿ ತುಂಬಿ ಲಾರಿ ಮೂಲಕ ಸಾಗಿಸುವಷ್ಟರಲ್ಲಿಯೇ ಆಂಧ್ರ, ತೆಲಂಗಾಣ, ಮುಂಬೈ,ಪುಣೆ, ಕಲಬುರಗಿ, ಬೀದರ, ಜಹಿರಾಬಾದ, ತಾಂಡೂರ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಬಂದ್‌ ಆಗಿದ್ದರಿಂದ ರೈತರಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ.

ಚಿಂಚೋಳಿ ತಾಲೂಕಿನಲ್ಲಿ ಹೆಚ್ಚಿನ ರೈತರು ಕಲ್ಲಂಗಡಿ ಬೆಳೆದಿದ್ದಾರೆ. ಮೊದಲ ಹಂತದಲ್ಲಿ 80 ಟನ್‌ ಕಲ್ಲಂಗಡಿ ಮಾರಾಟವಾಗಿದೆ. ಇನ್ನು 25 ಟನ್‌ ಕಲ್ಲಂಗಡಿ ಮಾರಾಟ ಆಗದೇ ಉಳಿದಿದೆ. ಪಪ್ಪಾಯಿ 25 ಎಕರೆ, ಬಾಳೆಹಣ್ಣು, ಉಳ್ಳಾಗಡ್ಡಿ, ಅರಿಶಿಣವನ್ನು ತಲಾ ಒಂದು ಸಾವಿರ ಎಕರೆಯಲ್ಲಿ ರೈತರು ಬೆಳೆದಿದ್ದಾರೆ. ಆದರೆ ಎಲ್ಲ ಕಡೆ ಲಾಕ್‌ ಡೌನ್‌ ಇರುವುದರಿಂದ ಸರ್ಕಾರದಿಂದಲೇ ಈ ಎಲ್ಲ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ಪ್ರಯತ್ನ ನಡೆಯುತ್ತಿದೆ.
ಅಜೀಮುದ್ದಿನ್‌,
ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next