ಚಿಂಚೋಳಿ: ತಾಲೂಕಿನ ಕಲಬುರಗಿ ಸಿಮೆಂಟ್ ಪ್ರಾವೆಟ್ ಕಂಪನಿ ಚತ್ರಸಾಲ ಮತ್ತು ಚೆಟ್ಟಿನಾಡ ಸಿಮೆಂಟ್ ಕಂಪನಿಗಳಲ್ಲಿ ಕೊರೊನಾ ವೈರಸ್ ಕುರಿತು ಮುಂಜಾಗ್ರತೆ ಕ್ರಮ ಕೈಕೊಳ್ಳಲಾಗಿದೆ. ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲ ನೌಕರದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸೂಚಿಸಲಾಗಿದೆ ಎಂದು ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಂಪನಿ ನೌಕರರು ಮತ್ತು ವಾಹನ ಚಾಲಕರಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡರೆ ಕಂಪನಿ ವೈದ್ಯರಿಂದ ಪರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
ಕಲಬುರಗಿ ಜಿಲ್ಲಾಧಿಕಾರಿಗಳು ನೀಡಿದ ಸೂಚನೆ ಪಾಲಿಸಲಾಗುತ್ತಿದೆ. ಕಂಪನಿ ಬಗ್ಗೆ ಏನಾದರು ವಿಷಯಗಳಿದ್ದರೆ ಕೇವಲ ಕರೆ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಾಗುತ್ತಿದೆ. ಕಂಪನಿಯೊಳಗೆ ಪ್ರವೇಶಿಸುವ ಎಲ್ಲ ನೌಕರರಿಗೆ ಪ್ರವೇಶದ್ವಾರದಲ್ಲಿಯೇ ಪರೀಕ್ಷಿಸಿ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಕಲಬುರಗಿ ಸಿಮೆಂಟ್ ಕಂಪನಿಯಲ್ಲಿ ಒಟ್ಟು 750 ನೌಕರದಾರರಿಗೆ ಮಾಸ್ಕ್ ಸೇರಿದಂತೆ ಸೆಪ್ಟಿ ಕಿಟ್ ನೀಡಲಾಗಿದೆ. ನಮ್ಮಲ್ಲಿ ಹೆಚ್ಚು ಮುಂಜಾಗ್ರತಾ ಕ್ರಮ ಕೈಕೊಳ್ಳಲಾಗಿದೆ ಎಂದರು.
ಚೆಟ್ಟಿನಾಡ ಸಿಮೆಂಟ್ ಕಂಪನಿಯ ಸದಾಶಿವ ಉಪ್ಪಿನ ಮಾತನಾಡಿ, ಕಂಪನಿಯಲ್ಲಿರುವ 650 ನೌಕರದಾರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಎಲ್ಲ ಪ್ರವೇಶ ದ್ವಾರಗಳಲ್ಲಿ ಕೊರೊನಾ ವೈರಸ್ ಕುರಿತು ಫಲಕಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ವೈದ್ಯ ಡಾ| ವಿದ್ಯಾಸಾಗರ, ಭೀಮರೆಡ್ಡಿ, ಹಣಮಂತರೆಡ್ಡಿ. ಡಾ| ಜಗದೀಶ ಚಂದ್ರ ಬುಳ್ಳ, ಶಿರಸ್ತೇದಾರ ವೆಂಕಟೇಶ ದುಗ್ಗನ್, ಬಸವರಾಜ ಕೋರಿ ಇದ್ದರು.